ವಿಶ್ವದ ಮೂರನೇ ಒಂದರಷ್ಟು ಮರದ ಪ್ರಬೇಧ ವಿನಾಶದ ಅಂಚಿನಲ್ಲಿ: ವರದಿ

Update: 2021-09-01 17:01 GMT
ಸಾಂದರ್ಭಿಕ ಚಿತ್ರ

ಲಂಡನ್, ಸೆ.1: ವಿಶ್ವದಲ್ಲಿರುವ ವಿವಿಧ ಪ್ರಬೇಧಗಳ ಮರಗಳ ಮೂರನೇ ಒಂದರಷ್ಟು ಪ್ರಬೇಧ ವಿನಾಶದ ಅಪಾಯ ಎದುರಿಸುತ್ತಿದ್ದರೆ ನೂರಾರು ಪ್ರಬೇಧದ ಮರಗಳು ವಿನಾಶದ ಅಂಚಿನಲ್ಲಿವೆ ಎಂದು ಬೊಟ್ಯಾನಿಕ್ ಗಾರ್ಡನ್ಸ್ ಕನ್ಸರ್ವೇಷನ್ ಇಂಟರ್ನ್ಯಾಷನಲ್ (ಬಿಜಿಸಿಐ) ವರದಿ ಹೇಳಿದೆ. ‌

ಸುಮಾರು 17,500 ಮರದ ಪ್ರಬೇಧಗಳು ಅಂದರೆ 30%ದಷ್ಟು ಪ್ರಬೇಧಗಳು ಅಳಿವಿನ ಅಪಾಯ ಎದುರಿಸುತ್ತಿದ್ದರೆ 440 ಪ್ರಬೇಧಗಳ ಮರಗಳು 50ಕ್ಕೂ ಕಡಿಮೆ ಪ್ರಮಾಣದಲ್ಲಿ ಉಳಿದುಕೊಂಡಿದ್ದು ವಿನಾಶದ ಅಂಚಿನಲ್ಲಿವೆ . ಅಳಿವಿನ ಅಪಾಯದಲ್ಲಿರುವ ಸಸ್ತನಿಗಳು, ಪಕ್ಷಿಗಳು, ಉಭಯಚರಿಗಳು, ಸರೀಸ್ರಪಗಳಿಗೆ ಹೋಲಿಸಿದರೆ, ಅಳಿವಿನ ಅಪಾಯ ಎದುರಿಸುತ್ತಿರುವ ಮರಗಳ ಪ್ರಬೇಧ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

  ಆಗ್ನೇಯ ಏಶ್ಯಾದ ಮಳೆಕಾಡಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಮ್ಯಾಗ್ನೊಲಿಯಾಸ್(ಸಂಪಿಗೆ ಜಾತಿಯ ಒಂದು ಮರ), ಡಿಪ್ಟೀರಿಕಾರ್ಪ್ಸ್(ಎರಡು ದಳಗಳ ಹಣ್ಣನ್ನು ಹೊಂದಿರುವ ಒಂದು ಜಾತಿಯ ಮರ) ಮರಗಳು, ಓಕ್, ಮೇಪಲ್, ಎಬೋನೀಸ್ ಮುಂತಾದ ಪ್ರಬೇಧಗಳು ಅಪಾಯದಲ್ಲಿವೆ. ಮರಗಳು ಸ್ವಾಭಾವಿಕ ಪರಿಸರ ವ್ಯವಸ್ಥೆಗೆ ನೆರವಾಗುತ್ತದೆ ಮತ್ತು ಜಾಗತಿಕ ಉಷ್ಣಾಂಶ ಹೆಚ್ಚಳ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳ ನಿವಾರಣೆಗೆ ಅತೀ ಮುಖ್ಯವಾಗಿದೆ. ಒಂದು ಜಾತಿಯ ಮರಗಳು ವಿನಾಶವಾದರೂ ಅದು ಇತರ ಹಲವು ಮರಗಳ ನಾಶಕ್ಕೆ ಕಾರಣವಾಗುತ್ತದೆ. ಪ್ರತಿಯೊಂದು ಪ್ರಬೇಧದ ಮರಗಳೂ ಮುಖ್ಯವಾಗಿವೆ. ಈ ಮರಗಳನ್ನು ಅವಲಂಬಿಸಿದ ಅದೆಷ್ಟೋ ಜಾತಿಯ ಸಸ್ಯಗಳಿವೆ, ಜೊತೆಗೆ ಮನುಷ್ಯರ ಮೇಲೂ ನೇರ ಪರಿಣಾಮ ಬೀರುತ್ತದೆ.

ಮರಗಳಿಗೆ ನೆರವಿನ ಅಗತ್ಯವಿದೆ ಎಂದು ವಿಶ್ವದಾದ್ಯಂತದ ಜನರಿಗೆ ಎಚ್ಚರಿಕೆಯ ಕರೆ ನೀಡುವ ವರದಿ ಇದಾಗಿದೆ ಎಂದು ಬಿಜಿಸಿಐ ಪ್ರಧಾನ ಕಾರ್ಯದರ್ಶಿ ಪಾಲ್ ಸ್ಮಿತ್ ಹೇಳಿದ್ದಾರೆ. ಬೆಳೆ ಉತ್ಪಾದನೆ, ಕಟ್ಟಿಗೆ ಕಡಿಯುವುದು ಮತ್ತು ಜಾನುವಾರು ಸಾಕಣೆ- ಇವು ಮರಗಳ ಪ್ರಬೇಧಗಳಿಗೆ ಎದುರಾಗಿರುವ ಪ್ರಮುಖ ಬೆದರಿಕೆಯಾಗಿದೆ. ಜೊತೆಗೆ ಹವಾಮಾನ ಬದಲಾವಣೆ ಮತ್ತು ತಾಪಮಾನ ವೈಪರೀತ್ಯ ಇತರ ಬೆದರಿಕೆಯಾಗಿದೆ. ಕನಿಷ್ಟ 180 ಮರಗಳ ಪ್ರಬೇಧಗಳಿಗೆ ಸಮುದ್ರದ ನೀರಿನ ಮಟ್ಟ ಏರಿಕೆ ಹಾಗೂ ತೀವ್ರ ಹವಾಮಾನ ಪರಿಸ್ಥಿತಿಯ ನೇರ ಅಪಾಯವಿದೆ. ದ್ವೀಪಪ್ರದೇಶದಲ್ಲಿರುವ ಮರಗಳ ಪ್ರಬೇಧಗಳಿಗೆ ಸರಾಸರಿ ಅಪಾಯದ ಮಟ್ಟ ಹೆಚ್ಚಿದ್ದರೆ ದೊಡ್ಡ ದೇಶಗಳಲ್ಲಿ ಮರಗಳು ಎದುರಿಸುತ್ತಿರುವ ಅಪಾಯಗಳಲ್ಲಿನ ವೈವಿಧ್ಯತೆ ಹೆಚ್ಚಿದೆ . ಇದು ಅತ್ಯಂತ ಆತಂಕಕಾರಿಯಾಗಿದೆ, ಏಕೆಂದರೆ ಹಲವು ದ್ವೀಪಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರಗಳ ಪ್ರಬೇಧಗಳು ಬೇರೆಲ್ಲೂ ಕಾಣಸಿಗದು ಎಂದು ವರದಿ ಹೇಳಿದೆ.

ಬ್ರೆಝಿಲ್ ಗೆ ಅಗ್ರಸ್ಥಾನ

ಅತ್ಯಧಿಕ ಮರದ ಪ್ರಭೇದಗಳು ಅಪಾಯ ಎದುರಿಸುತ್ತಿರುವ 6 ದೇಶಗಳ ಪಟ್ಟಿಯಲ್ಲಿ ಬ್ರೆಝಿಲ್ ಗೆ ಅಗ್ರಸ್ಥಾನವಿದ್ದು ಈ ದೇಶದಲ್ಲಿ 1,788 ಮರದ ಪ್ರಭೇದಗಳು ಅಪಾಯದಲ್ಲಿವೆ.

ಇಂಡೊನೇಶ್ಯಾ, ಮಲೇಶ್ಯಾ, ಚೀನಾ, ಕೊಲಂಬಿಯಾ ಮತ್ತು ವೆನೆಝುವೆಲಾ ಈ ಪಟ್ಟಿಯಲ್ಲಿರುವ ಇತರ 5 ದೇಶಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News