ಮಾನನಷ್ಟ ದಾವೆಯಲ್ಲಿ ಗೆದ್ದ ಸಿಂಗಾಪುರ ಪ್ರಧಾನಿ

Update: 2021-09-01 17:02 GMT

ಸಿಂಗಾಪುರ, ಸೆ.1: ಆನ್ಲೈನ್ ವೇದಿಕೆಯಲ್ಲಿ ತಮ್ಮ ಕುಟುಂಬದ ಕುರಿತು ತಪ್ಪು ವರದಿ ಪ್ರಕಟಿಸಿ ಮಾನಹಾನಿ ಎಸಗಿದ್ದಾರೆಂದು ಇಬ್ಬರು ಬ್ಲಾಗ್ ಬರಹಗಾರರ ವಿರುದ್ಧ ಹೂಡಿದ್ದ ಮಾನನಷ್ಟ ದಾವೆಯಲ್ಲಿ ಸಿಂಗಾಪುರದ ಪ್ರಧಾನಿ ಲೀ ಸೇನ್ ಲೂಂಗ್ರ ಪರ ತೀರ್ಪು ಬಂದಿದ್ದು, ಅವರಿಗೆ 275,113 ಡಾಲರ್ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ಸಿಂಗಾಪುರದ ಹೈಕೋರ್ಟ್ ಆದೇಶಿಸಿದೆ.

ಪ್ರಧಾನಿ ಲೀ ಸೇನ್ ಲೂಂಗ್ರ ತಂದೆ, ಆಧುನಿಕ ಸಿಂಗಾಪುರದ ಸ್ಥಾಪಕ ಎಂದು ಖ್ಯಾತಿ ಪಡೆದಿರುವ ಲೀ ಕ್ವಾನ್ ಯಿವ್ ಅವರ ಮನೆ ಹಾಗೂ ಆಸ್ತಿಯ ನಿರ್ವಹಣೆಯ ವಿಷಯದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು 2019ರ ಆಗಸ್ಟ್ನಲ್ಲಿ ಪ್ರಕಟವಾದ ಲೇಖನಕ್ಕೆ ಸಂಬಂಧಿಸಿ ಬ್ಲಾಗ್ ಬರಹಗಾರರಾದ ರುಬ್ಬಾಷಿನಿ ಷನ್ಮುಗನಾಥನ್ ಮತ್ತು ಬ್ಲಾಗ್ನ ಸಂಪಾದಕ ಕ್ಸು ಯುವಾನ್ ಚೆನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಆಡ್ರೆ ಲಿಮ್ ‘ ಪ್ರಧಾನಿ ಲೀ ಅಪ್ರಾಮಾಣಿಕ ವ್ಯಕ್ತಿ ಎಂದು ಉಲ್ಲೇಖಿಸಿರುವ ಈ ವರದಿಯಿಂದ ಲೀಯ ಘನತೆ ಮತ್ತು ಗೌರವಕ್ಕೆ ಕುಂದುಂಟಾಗಿದೆ. ವೈಯಕ್ತಿಕವಾಗಿ ಮಾತ್ರವಲ್ಲ, ಪ್ರಧಾನಿಯಾಗಿಯೂ ಅವರ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಜೊತೆಗೆ ಆಡಳಿತ ನಡೆಸುವ ಅವರ ಸಾಮರ್ಥ್ಯದ ಬಗ್ಗೆಯೂ ಪ್ರಶ್ನೆ ಮೂಡಿಸಿದೆ’ ಎಂದಿದ್ದಾರೆ. ಸಿಂಗಾಪುರ ಮೂಲದ ಕ್ಸು 210,000 ಡಾಲರ್ ಮೊತ್ತವನ್ನು, ಮಲೇಶ್ಯಾ ಮೂಲದ ರುಬ್ಬಾಷಿನಿ 160,000 ಡಾಲರ್ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.

ಈ ಮೊತ್ತವನ್ನು ಸಮಾಜಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡಲಾಗುವುದು ಎಂದು ಪ್ರಧಾನಿಯವರ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News