ವೀಕೆಂಡ್ ಕರ್ಫ್ಯೂ ತೆರವುಗೊಳಿಸದಿದ್ದಲ್ಲಿ ಅಂಗಡಿಗಳನ್ನು ತೆರೆದಿಟ್ಟು ಪ್ರತಿಭಟನೆ: ಪುತ್ತೂರು ವರ್ತಕರ ಎಚ್ಚರಿಕೆ

Update: 2021-09-02 07:17 GMT

ಪುತ್ತೂರು, ಸೆ.2: ಲಾಕ್ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಿಂದಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತವು ವೀಕೆಂಡ್ ಕರ್ಫ್ಯೂ ತೆರವುಗೊಳಿಸದಿದ್ದಲ್ಲಿ ಶನಿವಾರ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟು ತೆರದಿಟ್ಟು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಎಚ್ಚರಿಸಿದ್ದಾರೆ.

ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಂಜೆ 7ರ ಬಳಿಕ ನಡೆಯುವ ಅನೇಕ ಉದ್ಯಮಗಳಿವೆ. ಅಲ್ಲದೆ ಶನಿವಾರ ಮತ್ತು ರವಿವಾರ ಮಾತ್ರ ನಡೆಯುವ ಸಾಕಷ್ಟು ವ್ಯವಹಾರಗಳಿವೆ, ಆದರೆ ಕೊರೋನ ನಿರ್ನಾಮವಾಗಲು ಇನ್ನೂ ಹಲವು ವರ್ಷಗಳು ತಗಲಬಹುದು. ಇದಕ್ಕೆ ಲಾಕ್ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಪರಿಹಾರವಲ್ಲ. ಸರಕಾರ ಇದನ್ನು ಮಾಡುವ ಬದಲು ಶೇ. 100 ವ್ಯಾಕ್ಸಿನೇಶನ್ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಉದ್ಯಮಿಗಳ ಹಾಗೂ ಉದ್ಯೋಗಿಗಳ ಹಿತದೃಷ್ಠಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ನಿರುದ್ಯೋಗ ಸಮಸ್ಯೆನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರ ಬಂದ್ ತೆರವುಗೊಳಿಸವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರು ದೇಶದ ಬೆನ್ನೆಲುಬಾದರೆ ಉದ್ಯಮಿಗಳು ದೇಶದ ಆರ್ಥಿಕ ರಕ್ಷಾ ಕವಚವಾಗಿದ್ದಾರೆ. ತಯಾರಕ ಮತ್ತು ಗ್ರಾಹಕರ ನಡುವೆ ಸೇತುವೆಯಾಗಿರುವ ಉದ್ಯಮಿಗಳು ಕರ್ಫ್ಯೂನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದು ವೀಕೆಂಡ್ ಕರ್ಫ್ಯೂ ತೆರವುಗೊಳಿಸುಂವತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗೆ, ಜಿಲ್ಲಾಧಿಕಾರಿಗೆ, ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಪುತ್ತೂರಿನ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಸಂಘಕ್ಕೆ ನೆಲ್ಯಾಡಿ, ಉಪ್ಪಿನಂಗಡಿ, ಕಡಬ, ಕುಂಬ್ರ, ಕೆಯ್ಯೂರು, ತಿಂಗಳಾಡಿ, ಈಶ್ವರಮಂಗಲ ವ್ಯಾಪ್ತಿಯ ವರ್ತಕ ಸಂಘಗಳು ಬೆಂಬಲ ನೀಡಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್, ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News