ಬಿಜೆಪಿಯಿಂದ ಲಸಿಕೆ, ಆರೋಗ್ಯ ತಪಾಸಣೆ, ಕಾರ್ಮಿಕರ ಕಿಟ್‌ನಲ್ಲಿ ರಾಜಕೀಯ: ಹರೀಶ್ ಕುಮಾರ್ ಆರೋಪ

Update: 2021-09-02 08:13 GMT

ಮಂಗಳೂರು, ಸೆ.2: ಬಿಜೆಪಿಯ ಜನಪ್ರತಿನಿಧಿಗಳು ಸರಕಾರದಿಂದ ಜನಸಾಮಾನ್ಯರಿಗೆ ಸಿಗಬೇಕಾದ ಹಕ್ಕನ್ನೂ ರಾಜಕೀಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಲಸಿಕೆ ಹಂಚಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರ ಆರೋಗ್ಯ ತಪಾಸಣೆ ಹಾಗೂ ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಿಂದ ನೀಡಲಾಗುವ ಆಹಾರ ಪೊಟ್ಟಣಗಳನ್ನು ವಿತರಿಸುವ ಕಾರ್ಯವನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳನ್ನು ಎಲ್ಲಾ ಕಾರ್ಯಗಳಿಂದ ಹೊರಗಿಟ್ಟು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಂದರು ಕಾರ್ಪೊರೇಟರ್ ಲತೀಫ್ ಅವರ ಕ್ಷೇತ್ರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕಾಗಿ ಆರಂಭದಲ್ಲಿ 500 ಮಂದಿಗೆ ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಎರಡು ದಿನಗಳಿಗೆ ಮೊದಲು 300 ಎಂದು ಹೇಳಿ, ಬಳಿಕ 200 ಲಸಿಕೆ ಹೇಳಿ ಲಸಿಕೆ ನೀಡುವ ದಿನದ ಹಿಂದಿನ ದಿನ ರಾತ್ರಿ ಕರೆ ಮಾಡಿ ನಾಳೆ ಲಸಿಕೆ ಕಾರ್ಯಕ್ರಮ ರದ್ದು ಎಂದು ಹೇಳುವ ಮೂಲಕ ಅದಾಗಲೇ ಮಾಹಿತಿ ನೀಡಲಾಗಿದ್ದ ಜನರಿಗೆ ಗೊಂದಲದಲ್ಲಿ ಸಿಲುಕಿಸಲಾಗಿದೆ. ಲಸಿಕೆ ನೀಡುವ ಕಾರ್ಯಕ್ರಮವನ್ನು ಹೈಜಾಕ್ ಮಾಡಿ ರಾಜಕೀಯವಾಗಿಸುವುದು ನಿಜಕ್ಕೂ ಖಂಡನೀಯ. ಕಳೆದ ಸುಮಾರು ಎರಡು ವರ್ಷದಿಂದೀಚೆಗೆ ಜಿಲ್ಲೆಯಲ್ಲಿ 18ರಿಂದ 44 ವರ್ಷದ ವಯಸ್ಸಿನವರಿಗೆ ನೀಡಲಾದ ಲಸಿಕಾ ಪ್ರಮಾಣ ಶೇ.14, 45ರಿಂದ 60 ವರ್ಷದವರೆಗೆ ಶೇ.40, 60 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆದವರು ಶೇ.57 ಮಾತ್ರ. ಸರಕಾರಕ್ಕೆ ಯಾಕೆ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಮಾತ್ರವಲ್ಲದೆ ಲಸಿಕಾ ಕಾರ್ಯಕ್ರಮ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ನಡೆಯಬೇಕೇ ಹೊರತು ಬಿಜೆಪಿ ಕಾರ್ಯಕರ್ತರ ಮನೆಯ ಸಮೀಪವಲ್ಲ ಎಂದು ಅವರು ಹೇಳಿದರು.

ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಡಿ ರಾಜ್ಯದಲ್ಲಿ 8,000 ಕೋಟಿ ರೂ. ಸಂಗ್ರಹವಿದೆ. ಅದರಡಿ ಕಾರ್ಮಿಕರಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ವಿತರಣೆಗೆ ಬಂದ ಆಹಾರ ಪೊಟ್ಟಣ ಅಲ್ಲಿನ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ ಹರೀಶ್ ಕುಮಾರ್, ಹಲವು ಕಡೆಗಳಲ್ಲಿ ಇಂತಹ ಆಹಾರ ಪೊಟ್ಟಣಗಳನ್ನು ಬಿಜೆಪಿ ಮನೆಗಳಲ್ಲಿ ದಾಸ್ತಾನು ಇಡುವ ಬಗ್ಗೆ ತಮಗೆ ಮಾಹಿತಿ ದೊರಕಿರುವುದಾಗಿ ಹೇಳಿದರು. ಬಿಜೆಪಿ ಆಡಳಿತ ಇರುವಲ್ಲಿ ಗ್ರಾಪಂಗಳಲ್ಲಿ ಪೊಟ್ಟಣ ವಿತರಿಸಲಾದರೆ, ಕಾಂಗ್ರೆಸ್ ಆಡಳಿತ ಇರುವ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ದಾಸ್ತಾನು ಇರಿಸಿರುವುದು ಯಾರ ಒತ್ತಡದಿಂದ ಎಂದು ಅವರು ಪ್ರಶ್ನಿಸಿದರು.

ಕೆಎಸ್ಸಾರ್ಟಿಸಿ ಬಸ್ಸನ್ನು ಐಸಿಯು ಆಗಿ ಪರಿವರ್ತಿಸಿ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ತಪಾಸಣೆ ಕಾರ್ಯದಲ್ಲೂ ಇದೇ ರೀತಿ ರಾಜಕೀಯ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕಾದ ಅಧಿಕಾರಿಗಳು ಕೂಡಾ ಬಿಜೆಪಿಯ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹರೀಶ್ ಕುಮಾರ್ ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷ ಮುಖಂಡರಾದ ಶಾಹುಲ್ ಹಮೀದ್, ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ, ಸುಧೀರ್ ಟಿ.ಕೆ., ನೀರಜ್ ಪಾಲ್, ಅಪ್ಪಿ, ಸಬಿತಾ ಮಿಸ್ಕಿತ್, ಶೋಭಾ ಪಡೀಲ್, ಶಬೀರ್ ಎಸ್., ನಝೀರ್ ಬಜಾಲ್ ಉಪಸ್ಥಿತರಿದ್ದರು.


ಲಸಿಕಾ ಪ್ರಮಾಣ ಪತ್ರದಲ್ಲಿ ಹಾಕುವ ಪ್ರಧಾನಿ ಮೋದಿ ಭಾವಚಿತ್ರ ಮರಣ ಪ್ರಮಾಣಪತ್ರದಲ್ಲೂ ಹಾಕಲಿ!

ಸಾಂಕ್ರಾಮಿಕದಂತಹ ಈ ಸಂದರ್ಭದಲ್ಲಿ ಜನಸಾಮಾನ್ಯರ ಆರೋಗ್ಯದ ಹಕ್ಕು ಸರಕಾರದ ಜವಾಬ್ದಾರಿ. ಆದರೆ ಲಸಿಕೆಯ ಸರ್ಟಿಫಿಕೇಟ್‌ನಲ್ಲೂ ಪ್ರಧಾನಿ ಮೋದಿ ಫೋಟೋ ಅಳವಡಿಸುವ ಸರಕಾರ ರೋಗದಿಂದ ಸತ್ತವರಿಗೆ ನೀಡುವ ಮರಣ ಪ್ರಮಾಣ ಪತ್ರದಲ್ಲೂ ಮೋದಿ ಫೋಟೋವನ್ನು ಹಾಕಲಿ ಎಂದು ಹರೀಶ್ ಕುಮಾರ್ ವ್ಯಂಗ್ಯವಾಡಿದರು.

ಕೋವಿಡ್‌ನಿಂದಾಗಿ ಜನ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ. ಸರಕಾರ ಹಠಕ್ಕೆ ಬಿದ್ದಂತೆ ಗ್ಯಾಸ್ ದರವನ್ನು ಏರಿಕೆ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News