ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಾಗ 3ನೇ ಅಲೆಯೂ ಮುಗಿಯುತ್ತದೆ: ಕೇಂದ್ರಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ: ಕೋವಿಡ್ -19 ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸಲು ಹಾಗೂ ಮರಣ ಪ್ರಮಾಣಪತ್ರಗಳನ್ನು ನೀಡಲು ಮಾರ್ಗಸೂಚಿಗಳನ್ನು ರೂಪಿಸಲು ಜೂನ್ 30 ರ ಆದೇಶದ ಪಾಲನಾ ವರದಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ಸೆಪ್ಟೆಂಬರ್ 11 ರವರೆಗೆ ಕಾಲಾವಕಾಶ ನೀಡಿದೆ. ಸರಕಾರವು ಕೋರಿದ್ದ 10 ದಿನಗಳನ್ನು ನೀಡಲು ನ್ಯಾಯಾಲಯವು ನಿರಾಕರಿಸಿದೆ.
ಕೊನೆಯ ಆದೇಶದ ಬಳಿಕ ಮಹತ್ವದ ಅವಧಿ ಕಳೆದಿದೆ ಎಂದು ಬೆಟ್ಟು ಮಾಡಿದ ನ್ಯಾಯಾಲಯ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕೊರೋನದ ಮೂರನೇ ಅಲೆಯೂ ಮುಗಿಯುತ್ತದೆ ಹಾಗೂ ಸರಕಾರವು ಇನ್ನೂ ದೊಡ್ಡ ಸವಾಲನ್ನು ಎದುರಿಸಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
"ಮರಣ ಪ್ರಮಾಣಪತ್ರಗಳು, (ಮರಣಕ್ಕೆ ಪರಿಹಾರ) ಇತ್ಯಾದಿಗಳ ಆದೇಶವನ್ನು ಬಹಳ ಹಿಂದೆಯೇ ರವಾನಿಸಲಾಗಿದೆ. ನೀವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಹೊತ್ತಿಗೆ, ಮೂರನೇ ಅಲೆಯೂ ಮುಗಿಯುತ್ತದೆ" ಎಂದು ನ್ಯಾಯಾಲಯ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳು ಹಣಕಾಸಿನ ಪರಿಹಾರವನ್ನು ಪಡೆಯಬೇಕು ಎಂದು ಜೂನ್‌ನಲ್ಲಿ ನ್ಯಾಯಾಲಯವು ತೀರ್ಪು ನೀಡಿತು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮೊತ್ತವನ್ನು ನಿರ್ಧರಿಸಲು ಹಾಗೂ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಲು ಆರು ವಾರಗಳ ಅವಕಾಶ ನೀಡಿತ್ತು.