ಪ್ರಧಾನಿ ಮೋದಿ ಜನ್ಮದಿನವನ್ನು 'ಜುಮ್ಲಾ ದಿವಸ್' ಎಂದು ಆಚರಿಸಲಿರುವ 'ಯುವ ಹಲ್ಲಾ ಬೋಲ್' ಸಂಘಟನೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನವಾದ ಸೆಪ್ಟೆಂಬರ್ 17ರಂದು 'ಯುವ ಹಲ್ಲಾ ಬೋಲ್' ಎಂಬ ಯುವ ಸಂಘಟನೆಯು `ಜುಮ್ಲಾ ದಿವಸ್' ಎಂದು ಆಚರಿಸಲು ನಿರ್ಧರಿಸಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರ ನಿರೀಕ್ಷೆಗಳನ್ನು ಹೇಗೆ ಹುಸಿಯಾಗಿಸಿದೆ ಎಂದು ಜನರಿಗೆ ಮನದಟ್ಟು ಮಾಡಲು ಈ ದಿನವನ್ನು ಬಳಸಲು ಸಂಘಟನೆ ನಿರ್ಧರಿಸಿದೆಯಲ್ಲದೆ, ಪ್ರಧಾನಿ ಮೋದಿಯೇ ಜನಪ್ರಿಯಗೊಳಿಸಿದ `ತಟ್ಟೆ ಬಾರಿಸುವುದು' ಮುಂತಾದ ಚಟುವಟಿಕೆಗಳು ಈ ದಿನ ನಡೆಯಲಿದೆ ಎಂದು thewire.in ವರದಿ ಮಾಡಿದೆ.
ಈ ಬಾರಿ ಬಿಜೆಪಿಯು ಪ್ರಧಾನಿಯ ಜನ್ಮದಿನವನ್ನು 'ಕಿಸಾನ್ ಜವಾನ್ ಸಮ್ಮಾನ್ ದಿವಸ್' ಎಂದು ಆಚರಿಸಲಿದ್ದರೆ ನಾವು 'ಜುಮ್ಲಾ ದಿವಸ್' ಎಂದು ಆಚರಿಸುತ್ತೇವೆ. ಈ ಬಾರಿ ಕೇಂದ್ರದ ನಿರ್ಧಾರಗಳಿಂದ ಬಾಧಿತವಾಗಿರುವ ಬ್ಯಾಂಕ್‍ಗಳ ಕೆಲ ಸಂಘಟನೆಗಳು, ಸಾರ್ವಜನಿಕ ರಂಗ ಉದ್ದಿಮೆಗಳ ಸಂಘಟನೆಗಳೂ ತಮ್ಮ ಜತೆಗೆ ಕೈಜೋಡಿಸಲಿವೆ ಎಂದು ಯುವ ಹಲ್ಲಾ ಬೋಲ್ ಮುಖ್ಯ ವಕ್ತಾರ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಷವ್ ರಂಜನ್ ಹೇಳಿದ್ದಾರೆ.