×
Ad

ಡಾ.ಎಸ್.ಡಿ.ಶೆಟ್ಟಿ, ಡಾ.ಪಾದೇಕಲ್ಲುಗೆ ತಾಳ್ತಜೆ ಕೇಶವ ಪ್ರಶಸ್ತಿ

Update: 2021-09-03 21:31 IST
ಡಾ.ಎಸ್.ಡಿ.ಶೆಟ್ಟಿ, ಡಾ.ಪಾದೇಕಲ್ಲು

ಉಡುಪಿ, ಸೆ.3: 2020 ಹಾಗೂ 2021ನೇ ಸಾಲಿನ ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿಗೆ ಕ್ರಮವಾಗಿ ಸಾಹಿತಿ, ಸಂಶೋಧಕ ಹಾಗೂ ವಿದ್ವಾಂಸ ಡಾ.ಎಸ್.ಡಿ. ಶೆಟ್ಟಿ ಹಾಗೂ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟ ಆಯ್ಕೆಯಾಗಿದ್ದಾರೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಸಾಹಿತ್ಯ, ಗಮಕ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ವಿದ್ವಾಂಸ, ಸಂಶೋಧಕರಿಗೆ ತಾಳ್ತಜೆ ಕೇಶವ ಭಟ್ಟ ನೆನಪಿನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಡಾ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉ.ಕ.ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಸಾಲಿಕೇರಿಯವರಾದ ಡಾ.ಶಾಂತಿನಾಥ ದೀಪಣ್ಣ ಶೆಟ್ಟಿ ಧಾರವಾಡದಲ್ಲಿ ಎಂ.ಎ, ಡಿಪ್ಲೋಮಾ ಇನ್ ಎಫಿಗ್ರಫಿ ಪದವಿ ಪಡೆದು, ಉಡುಪಿ ಗೋವಿಂದ ಪೈ ಸಂಸ್ಥೆಯ ಮೂಲಕ ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದರು. ಸುಮಾರು 35 ವರ್ಷಗಳ ಕಾಲ ಉಜಿರೆಯ ಎಸ್‌ಡಜಿಎಂ ಕಾಲೇಜಿನಲ್ಲಿ ಪ್ರೊಫೆಸರ್, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದಾರೆ. ಪ್ರಸ್ತುತ ಉಜಿರೆಯ ಡಾ. ಹಾ.ಮಾ.ನಾಯಕ್ ಸಂಶೋಧನ ಕೇಂದ್ರದಲ್ಲಿ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೈನರ ಹಬ್ಬಗಳು, ದ.ಕ ಜಿಲ್ಲೆಯ ಜೈನ ಪರಂಪರೆ ಮತ್ತು ಅದರ ಶಿಷ್ಟ ಸಂಪ್ರದಾಯ, ತುಳುನಾಡಿನ ಜೈನಧರ್ಮ ಹೀಗೆ 20ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳನ್ನು ರಚಿಸಿರುವ ಡಾ.ಶೆಟ್ಟಿ ಉತ್ತಮ ಸಂಪಾದನಾ ಕೃತಿ ಪುರಸ್ಕಾರ, ಸಂಶೋಧನಾ ಪುರಸ್ಕಾರ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿದ್ಯಾಪೀಠ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ, ಗೌರವಸಂಮಾನಗಳಿಗೆ ಭಾಜನರಾಗಿದ್ದಾರೆ.

ಡಾ.ಪಾದೇಕಲ್ಲು ವಿಷ್ಣು ಭಟ್ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾದೇಕಲ್ಲು ಕರೋಪಾಡಿ ಗ್ರಾಮದವರು. ಮೈಸೂರು ವಿವಿಯಿಂದ ಎಂ.ಎ., ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕ, ಪ್ರಾಧ್ಯಾಪಕರಾಗಿ ವಿವಿಧ ಸರಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ಹಿರಿಯಡಕ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಸೇವಾ ನಿವೃತ್ತರಾಗಿದ್ದಾರೆ.

ಡಾ.ವಿಷ್ಣು ಭಟ್ಟ ಅವರ ಸುಮಾರು 30ಕ್ಕೂ ಅಧಿಕ ಸ್ವಂತ ಕೃತಿಗಳು ಪ್ರಕಟ ಗೊಂಡಿವೆ. ಅವುಗಳಲ್ಲಿ ಸೇಡಿಯಾಪು, ಪಂಡಿತವರೇಣ್ಯ, ಶ್ರೀಭಾಗವತೊ, ಸಾಹಿತ್ಯಾಧ್ಯಯನ, ಯಕ್ಷಗಾನ ಅಧ್ಯಯನ, ಸಂಶೋಧನ ತವನಿಧಿ, ಹಿರಿಯರಿವರು ಪ್ರಮುಖವಾದವು. ವಿಚಾರ ಪ್ರಪಂಚ, ಸಾವಿರದ ಗದ್ಯ, ರಾಮಾಶ್ವಮೇಧ, ಸೇಡಿಯಾಪು ಛಂದಸ್ಸಂಪುಟ, ಭಾನುಮತಿಯ ನೆತ್ತ, ಮಹಾಜನಪದ, ಶಬ್ದಾರ್ಥಶೋಧ ಅಲ್ಲದೆ ಸುಮಾರು 21ಕ್ಕೂ ಹೆಚ್ಚು ಪ್ರಮುಖ ಸಂಪಾದಿತ ಕೃತಿಗಳು. ಇವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ವಿದ್ವತ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ರಾಮವಿಠಲ ಪ್ರಶಸ್ತಿ, ಪುಸ್ತಕ ಬಹುಮಾನ ಮುಂತಾದ ಗೌರವ ಪ್ರಶಸ್ತಿಗಳು ಲಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News