ಚೀನಾ ನಮ್ಮ ಪ್ರಮುಖ ಸಹಭಾಗಿ: ತಾಲಿಬಾನ್
ಕಾಬೂಲ್, ಸೆ.3: ಚೀನಾವು ತಮ್ಮ ಅತ್ಯಂತ ಪ್ರಮುಖ ಸಹಭಾಗಿ ದೇಶವಾಗಿದ್ದು ಅಫ್ಘಾನ್‌ನ ಮರುನಿರ್ಮಾಣ ಮತ್ತು ಇಲ್ಲಿನ ಅಪಾರ ತಾಮ್ರದ ನಿಕ್ಷೇಪ ಗಣಿಗಾರಿಕೆಯಲ್ಲಿ ಚೀನಾದ ನೆರವನ್ನು ಬಯಸುವುದಾಗಿ ತಾಲಿಬಾನ್ ಹೇಳಿದೆ.
ಚೀನಾವು ನಮ್ಮ ಅತ್ಯಂತ ಪ್ರಮುಖ ಸಹಭಾಗಿಯಾಗಿದ್ದು ಅವರು ಅಫ್ಘಾನ್‌ನಲ್ಲಿ ಹೂಡಿಕೆ ಮಾಡಲು ಮತ್ತು ದೇಶದ ಪುನನಿರ್ಮಾಣ ಕಾರ್ಯಕ್ಕೆ ನೆರವಾಗಲು ಸಿದ್ಧರಾಗಿದ್ದಾರೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿರುವುದಾಗಿ ‘ಜಿಯೊ ನ್ಯೂಸ್’ ವರದಿ ಮಾಡಿದೆ.
ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ ಯೋಜನೆ( ಹಲವಾರು ಬಂದರು, ರಸ್ತೆ, ರೈಲ್ವೆ ಮತ್ತು ಕೈಗಾರಿಕಾ ಜಾಲದ ಮೂಲಕ ಚೀನಾವನ್ನು ಆಫ್ರಿಕಾ, ಏಶ್ಯಾ ಮತ್ತು ಯುರೋಪ್‌ನೊಂದಿಗೆ ಸಂಪರ್ಕಿಸುವ ಯೋಜನೆ)ಗೆ ತಾಲಿಬಾನ್‌ನ ಬೆಂಬಲವಿದೆ. ಅಫ್ಘಾನ್‌ನಲ್ಲಿ ಬೃಹತ್ ತಾಮ್ರದ ನಿಕ್ಷೇಪಗಳಿವೆ. ಇದನ್ನು ಆಧುನಿಕ ಗಣಿಗಾರಿಕೆ ಮೂಲಕ ಹೊರತೆಗೆಯಲು ಚೀನಾದ ನೆರವಿನ ಅಗತ್ಯವಿದೆ. ಅಲ್ಲದೆ ವಿಶ್ವದಾದ್ಯಂತ ನಮ್ಮ ಉತ್ಪನ್ನಗಳ ಮಾರಾಟಕ್ಕೆ ಚೀನಾ ಒಂದು ರೀತಿ ಪಾಸ್ ಇದ್ದಂತೆ ಎಂದು ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಅಫ್ಘಾನ್‌ನ ಸಾರ್ವಭೌಮತೆಯನ್ನು ಚೀನಾ ಗೌರವಿಸುತ್ತದೆ ಮತ್ತು ಅಫ್ಘಾನ್ ಜನತೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲು ಬಯಸುತ್ತೇವೆ ಎಂದು ಮಂಗಳವಾರ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದರು.
ರಶ್ಯ ಕೂಡಾ ತಾಲಿಬಾನ್‌ನ ಅತ್ಯಂತ ಪ್ರಮುಖ ಸಹಭಾಗಿಯಾಗಿದ್ದು ತಾವು ರಶ್ಯದೊಂದಿಗೆ ಉತ್ತಮ ಸಂಬಂಧ ಮುಂದುವರಿಸಲಿದ್ದೇವೆ ಎಂದು ತಾಲಿಬಾನ್ ಹೇಳಿದೆ.