×
Ad

ಆಸ್ಟ್ರೇಲಿಯಾ: ಸಿಖ್ ಸಮುದಾಯದವರ ಮೇಲೆ ದಾಳಿ ಪ್ರಕರಣ; ಹರ್ಯಾಣದ ವಿಶಾಲ್‌ಗೆ 1 ವರ್ಷ ಜೈಲುಶಿಕ್ಷೆ

Update: 2021-09-03 22:56 IST

ಸಿಡ್ನಿ, ಸೆ.3: ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಸಿಡ್ನಿಯಲ್ಲಿ ಸಿಖ್ ಸಮುದಾಯದವರ ಮೇಲೆ ಹಲ್ಲೆ ನಡೆಸಿದ್ದೂ ಸೇರಿದಂತೆ 3 ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹರ್ಯಾಣ ಮೂಲದ ವಿಶಾಲ್ ಜೂಡ್‌ಗೆ ಆಸ್ಟ್ರೇಲಿಯಾದ ನ್ಯಾಯಾಲಯ 12 ತಿಂಗಳ ಜೈಲುಶಿಕ್ಷೆ ವಿಧಿಸಿದೆ.

ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಯಾಗಿರುವ ಜೂಡ್ ಎಪ್ರಿಲ್ 16ರಿಂದ ಜೈಲಿನಲ್ಲಿದ್ದು, ಅಕ್ಟೋಬರ್ 15ಕ್ಕೆ 6 ತಿಂಗಳ ಜೈಲು ಅವಧಿ ಪೂರ್ಣಗೊಳ್ಳುವುದರಿಂದ ಪರೋಲ್‌ಗೆ ಅರ್ಹನಾಗುತ್ತಾನೆ. ಆದರೆ, ವೀಸಾ ಅವಧಿ ಪೂರ್ಣಗೊಂಡ ಬಳಿಕವೂ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡ ಹಿನ್ನೆಲೆಯಲ್ಲಿ, ಈತ ಮತ್ತೆ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಬಿಜೆಪಿ ಮುಖಂಡ ಕಪಿಲ್ ಮಿಶ್ರಾ, ಬಿಜೆಪಿ ಯುವಮೋರ್ಛಾದ ರಾಷ್ಟ್ರೀಯ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಗ್ಗಾ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಛೋಪ್ರಾ ಸಹಿತ ಹಲವರು ಜೂಡ್‌ನ ಬಿಡುಗಡೆಗಾಗಿ ಆಶಿಸಿದ್ದರು. ಈತನನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಭಾರತದಲ್ಲಿ ಹಲವು ಆನ್‌ಲೈನ್ ಬಳಕೆದಾರರು ಆನ್‌ಲೈನ್ ಅಭಿಯಾನವನ್ನೂ ಆರಂಭಿಸಿದ್ದರು. ಆದರೆ, ಜೂಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಳೆದ ತಿಂಗಳು ನ್ಯಾಯಾಲಯ ತಿರಸ್ಕರಿಸಿತ್ತು.

ಜೂಡ್ ಮೇಲಿದ್ದ 3 ಅಪರಾಧಗಳು ಸಾಬೀತಾಗಿದ್ದು ಜೈಲುಶಿಕ್ಷೆ ವಿಧಿಸಿ ಆಸ್ಟ್ರೇಲಿಯಾದ ನ್ಯಾಯಾಲಯ ತೀರ್ಪು ನೀಡಿದ ಮಾಹಿತಿ ಲಭಿಸಿದೆ. ತೀರ್ಪಿನ ವಿವರವನ್ನು ಪರಿಶೀಲಿಸುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿನ ನಮ್ಮ ಕಾನ್ಸುಲೇಟ್ ಮತ್ತು ಹೈಕಮಿಷನ್ ಕೂಡಾ ಈ ವಿಷಯವನ್ನು ಗಮನಿಸುತ್ತಿದೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರೀಂದಮ್ ಬಾಗ್ಚಿ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News