ಎಲ್ಲರೊಂದಿಗೆ ಬೆರೆತು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸೋಣ: ಡಾ.ಸಯ್ಯದ್ ನಾಸೀರ್ ಹುಸೈನ್

Update: 2021-09-03 17:27 GMT

ಕೊಣಾಜೆ: ಅಲ್ಪಸಂಖ್ಯಾತ ಘಟಕವು ಎಲ್ಲರೊಂದಿಗೆ ಬೆರೆತುಕೊಂಡು ದಲಿತರು, ರೈತರು, ಅನ್ಯಾಯಕ್ಕೊಳಗಾದವರ ಅಭಿವೃದ್ದಿಗಾಗಿ ಪಣ ತೊಡಬೇಕು ಹಾಗೂ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು  ಬಲಿಷ್ಠಗೊಳಿಸಲು‌  ನಾವೆಲ್ಲರೂ ಮುಂದಾಗಬೇಕು ಎಂದು ರಾಜ್ಯಸಭಾ ಪ್ರತಿಪಕ್ಷದ ಮುಖ್ಯ ಸಚೇತಕ ಡಾ.ಸಯ್ಯದ್ ನಾಸಿರ್ ಹುಸೈನ್ ಹೇಳಿದರು.

ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ  ಶುಕ್ರವಾರ ನಡೆದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ‌ಸಂಖ್ಯಾತ ಘಟಕದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ, ಅಲ್ಪಸಂಖ್ಯಾತರಿಗೆ ದೈರ್ಯ ತುಂಬುವ ಕಾರ್ಯವು ಇಂದು ಅಗತ್ಯವಾಗಿ ಆಗಬೇಕಿದೆ. ಇತ್ತೀಚೆಗೆ ಅಲ್ಪಸಂಖ್ಯಾತರ ಪರವಾಗಿ ಮಾತನಾಡಿದರೆ ಎಲ್ಲಿ ತಮ್ಮ ರಾಜಕೀಯ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಆತಂಕ ಕೆಲವರಿಗೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಘಟಕಗಳು ಇಂದಿನ ದೇಶದ ಬೆಳವಣಿಗೆಯಲ್ಲಿ ನಮ್ಮ ಪಾತ್ರವನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಯ್ಯದ್ ಅಹ್ಮದ್ ಮಾತನಾಡಿ, ಕೋವಿಡ್ ಸಂದರ್ಭ ಧರ್ಮ ನೋಡದೆ ಸೇವೆ ಸಲ್ಲಿಸಿದವರನ್ನು ಗೌರವಿಸಿ ಪ್ರೋತ್ಸಾಹಿಸುವುದು ಉತ್ತಮ ಕೆಲಸ.  ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಬಡವರಿಗೆ ಅನ್ಯಾಯ ಮಾಡಿ ಇಬ್ಬಗೆ ನೀತಿ ಅನುಸರಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ  ಪಾಠ ಕಲಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಯು.ಟಿ.ಖಾದರ್ ಅವರು ಮಾತನಾಡಿದರು.

ಉಳ್ಳಾಲ‌ ಅಳಿವೆಬಾಗಿಲಲ್ಲಿ ಸಮುದ್ರ ಪಾಲಾಗುತ್ತಿದ್ದ ಮೀನುಗಾರ ನವಾಝ್ ರನ್ನು ರಕ್ಷಿಸಿದ ಸೂರ್ಯ ಪ್ರಕಾಶ್ ಡಿಸೋಜ, ಅಜಿತ್ ಕರ್ಕೇರ ಬೆಂಗ್ರೆ, ಪ್ರೇಮ್ ಪ್ರಕಾಶ್, ಅನಿಲ್ ಮೊಂತೆರೋ ಹಾಗೂ ರಿತೇಶ್ ಹೊಯ್ಗೆ ಬಝಾರ್ ಇವರನ್ನು ಸನ್ಮಾನಿಸಲಾಯಿತು. ‌

ಕಾರ್ಯಕ್ರಮದಲ್ಲಿ ಉಳ್ಳಾಲ‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮುಸ್ತಫಾ ಮಲಾರ್, ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಹಿಳಾ ಘಟಕದ ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಇನ್ನಿತರರು ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ರಝಾಕ್ ಕುಕ್ಕಾಜೆ ಮತ್ತು ಸುರಯ್ಯ ಅಂಜುಂ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News