ಉತ್ತರಪ್ರದೇಶ: 1.75 ಲಕ್ಷ ರೂಪಾಯಿ ವಂಚನೆ, ಬಿಜೆಪಿ ನಾಯಕನ ವಿರುದ್ಧ ಪ್ರಕರಣ
ಬಾರಬಂಕಿ: ಮಗನಿಗೆ ಶಾಲೆಯಲ್ಲಿ ಕೆಲಸ ಕೊಡಿಸಲು ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 1.75 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಿಜೆಪಿಯ ತ್ರಿದೇವಿಗಂಜ್ ವಿಭಾಗದ ಅಧ್ಯಕ್ಷ ಉತ್ತಮ್ ವರ್ಮಾ ಅವರನ್ನು ಇಲ್ಲಿನ ಲೋನಿ ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ರುಕ್ನಾಪುರದ ನಿವಾಸಿ ಪಿಯಾರ ದೇವಿ ಎಂಬ ಮಹಿಳೆ ರಸ್ತೆಯಲ್ಲಿ ಅಡ್ಡಹಾಕಿ ತರಾಟೆಗೆ ತೆಗೆದುಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಆದಾಗ್ಯೂ, ವರ್ಮಾ ಈ ಘಟನೆಯನ್ನು 'ರಾಜಕೀಯ ಪಿತೂರಿ' ಎಂದು ಕರೆದಿದ್ದಾರೆ. ಬಿಜೆಪಿಯ ಬಾರಾಬಂಕಿ ಜಿಲ್ಲಾ ಘಟಕವು ವರ್ಮಾ ಅವರಿಂದ ವಿವರಣೆ ಕೇಳಿದೆ.
ವೈರಲ್ ಆದ ವೀಡಿಯೊದಲ್ಲಿ ಮೋಟಾರ್ ಸೈಕಲ್‍ನಿಂದ ಬಂದ ವರ್ಮಾನನ್ನು ಭಿಲ್ವಾಲ್ ಕ್ರಾಸಿಂಗ್‌ನಲ್ಲಿ ಪಿಯಾರ ದೇವಿ ತಡೆದು ನಿಲ್ಲಿಸಿದ್ದರು ಹಾಗೂ ಬಿಜೆಪಿ ನಾಯಕನ ಕುತ್ತಿಗೆಪಟ್ಟಿಯನ್ನು ಹಿಡಿದುಕೊಂಡು ತನ್ನ ಹಣವನ್ನು ವಾಪಸ್ ನೀಡುವಂತೆ ಕೋರುತ್ತಾಳೆ.
ಪಿಯಾರ ದೇವಿ ನೀಡಿದ ಪೊಲೀಸ್ ದೂರಿನ ಪ್ರಕಾರ, ತನ್ನ ಮಗ ಮುಖೇಶ್ ಗೆ ಶಾಲೆಯಲ್ಲಿ ಉದ್ಯೋಗ ಕೊಡಿಸಲು ಸಹಾಯ ಮಾಡುವ ನೆಪದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ವರ್ಮಾ ಮಹಿಳೆಯಿಂದ 1.75 ಲಕ್ಷ ರೂ. ಪಡೆದಿದ್ದ. ಆದರೆ ಆತ ತನ್ನ ಭರವಸೆಯನ್ನು ಈಡೇರಿಸಲಿಲ್ಲ ಹಾಗೂ ಆಕೆ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಲು ಹೋದಾಗ ಬಿಜೆಪಿ ನಾಯಕ ಆಕೆಯನ್ನು ಥಳಿಸಿ ನಿಂದಿಸಿದ್ದ.
ದೇವಿಯ ದೂರಿನ ಮೇರೆಗೆ, ವರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 406 (ನಂಬಿಕೆಯ ಉಲ್ಲಂಘನೆ), 504 (ಉದ್ದೇಶಪೂರ್ವಕ ಅವಮಾನ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.