×
Ad

ವಕೀಲ ವೃತ್ತಿಯನ್ನು ಶ್ರೀಮಂತರ ವೃತ್ತಿಯೆಂದೇ ತಿಳಿಯಲಾಗುತ್ತಿದೆ: ಸಿಜೆಐ ರಮಣ

Update: 2021-09-04 18:56 IST

ಹೊಸದಿಲ್ಲಿ,ಸೆ.4: ಹಲವೊಮ್ಮೆ ಕಾನೂನನ್ನು ಸಿರಿವಂತರ ವೃತ್ತಿಯನ್ನಾಗಿ ನೋಡಲಾಗುತ್ತಿದೆ,ಆದರೆ ಸ್ಥಿತಿಯು ನಿಧಾನವಾಗಿ ಬದಲಾಗುತ್ತಿದೆ ಎಂದು ಶನಿವಾರ ಅಭಿಪ್ರಾಯಿಸಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು,ಭಾರೀ ಸಂಖ್ಯೆಯಲ್ಲಿ ನ್ಯಾಯಾಧೀಶರ ಹುದ್ದೆಗಳು ತೆರವಾಗಿವೆ ಮತ್ತು ನ್ಯಾಯಾಲಯಗಳಲ್ಲಿ ಸೂಕ್ತ ಮೂಲಸೌಕರ್ಯಗಳ ಕೊರತೆಯಿದೆ ಎಂದು ಬೆಟ್ಟು ಮಾಡಿದರು.
 ‌
ತನ್ನ ಸನ್ಮಾನಕ್ಕಾಗಿ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ರಮಣ, ಕಾನೂನು ಕ್ಷೇತ್ರದಲ್ಲಿ ಸ್ಥಿತಿಯು ಬದಲಾಗುತ್ತಿದೆ,ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತಿವೆ. ಆದರೂ ಕಾನೂನು ವೃತ್ತಿಯು ಈಗಲೂ ನಗರ ವೃತ್ತಿಯಾಗಿಯೇ ಉಳಿದುಕೊಂಡಿದೆ. ಈ ವೃತ್ತಿಯಲ್ಲಿ ಸ್ಥಿರತೆಯನ್ನು ಖಾತರಿ ಪಡಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವುದು ಸಮಸ್ಯೆಯಾಗಿದೆ ಎಂದರು.

ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ಕುರಿತು ವರದಿಯೊಂದನ್ನು ತಾನು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರಿಗೆ ಸಲ್ಲಿಸುವುದಾಗಿಯೂ ಅವರು ತಿಳಿಸಿದರು.
ನ್ಯಾಯಾಂಗದಲ್ಲಿ ಮತ್ತು ವಕೀಲ ಸಮುದಾಯದಲ್ಲಿ ಸಾಕಷ್ಟು ಮಹಿಳೆಯರ ಕೊರತೆಯನ್ನು ಎತ್ತಿ ತೋರಿಸಿದ ನ್ಯಾ.ರಮಣ,‘ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಲ ಶೇ.11ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ನಾವು ಸಾಧಿಸಿದ್ದೇವೆ ಮತ್ತು ಇದನ್ನು ಹೇಳಿಕೊಳ್ಳಲೂ ಕಷ್ಟವಾಗುತ್ತಿದೆ ’ ಎಂದರು.

‘ನನ್ನ ಹೈಕೋರ್ಟ್ ದಿನಗಳಲ್ಲಿ ಮಹಿಳೆಯರಿಗೆ ಟಾಯ್ಲೆಟ್ ಸೌಲಭ್ಯಗಳೂ ಇದ್ದಿರಲಿಲ್ಲ ಎನ್ನುವುದನ್ನು ನಾನು ನೋಡಿದ್ದೇನೆ. ಇದರಿಂದಾಗಿ ಮಹಿಳಾ ನ್ಯಾಯವಾದಿಗಳು ತೊಂದರೆಗಳನ್ನು ಎದುರಿಸುತ್ತಿದ್ದರು. ನಾನು ನ್ಯಾಯಾಧೀಶನಾದಾಗ ಸ್ಥಿತಿಯನ್ನು ಬದಲಿಸಲು,ಮೂಲಸೌಕರ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಿದ್ದೆ ’ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News