ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಪ್ರಜಾಪ್ರಭುತ್ವದಲ್ಲಿ ಅತಿಮುಖ್ಯ: ಅಮಿತ್ ಶಾ

Update: 2021-09-04 13:37 GMT

ಹೊಸದಿಲ್ಲಿ: "ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳಲ್ಲ, ಪ್ರಜಾಪ್ರಭುತ್ವದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಭಾರತದ 130 ಕೋಟಿ ಜನರು ತಮ್ಮ  ಸಾಮರ್ಥ್ಯವನ್ನು ಅರಿಯಲು ಸಾಧ್ಯವಾಗುವ ಪರಿಕಲ್ಪನೆಯಿದು. ಅದರ ಒಟ್ಟು ಪ್ರಯೋಜನ ದೇಶಕ್ಕೆ ಸಲ್ಲುತ್ತದೆ. ಕಾನೂನು ಸುವ್ಯವಸ್ಥೆ ಸಮಾಧಾನಕರವಾಗಿಲ್ಲದೇ ಇದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗದು. ಜನರ ಸಂವಿಧಾನದತ್ತ ಹಕ್ಕುಗಳನ್ನು ಕಾನೂನು ರಕ್ಷಿಸಬೇಕಿದೆ. ಹಾಗಾದಾಗ ದೇಶ ಪ್ರಗತಿ ಹೊಂದುತ್ತದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಎಂಡ್ ಡೆವಲೆಪ್ಮೆಂಟ್‍ನ 51ನೇ ಸ್ಥಾಪನಾ ದಿನದಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ಪ್ರಜಾಪ್ರಭುತ್ವದ ಕುರಿತ ಚರ್ಚೆಗಳಲ್ಲಿ ಜನರು ಸಂಸತ್ತು, ನ್ಯಾಯಾಂಗ ಮತ್ತು ಇತರ ಸಂಸ್ಥೆಗಳನ್ನು ಉಲ್ಲೇಖಿಸುತ್ತಾರೆ. ಆದರೆ ಪ್ರಜಾಪ್ರಭುತ್ವವನ್ನು ಗಸ್ತು ತಿರುಗುವ ಕಾನ್‍ಸ್ಟೇಬಲ್ ಯಶಸ್ವಿಗೊಳಿಸಿದ್ದಾರೆಂದು ನಾನು ಅಂದುಕೊಳ್ಳುತ್ತೇನೆ. ಆದರೆ ಪೊಲೀಸರ ವರ್ಚಸ್ಸಿಗೆ ಧಕ್ಕೆ ತರುವ  ಕೆಲಸ ಯಾವುದೋ ಕಾರಣಕ್ಕೆ ನಡೆದಿದೆ. ಕೆಟ್ಟ ಸುದ್ದಿಗಳು ಮಾತ್ರ ಹೆಚ್ಚು ಮಹತ್ವ ಪಡೆಯುತ್ತವೆ ಹಾಗೂ ಪೊಲೀಸರ ಒಳ್ಳೆಯ ಕಾರ್ಯವನ್ನು ನಿರ್ಲಕ್ಷ್ಯಿಸಲಾಗುತ್ತದೆ" ಎಂದು  ಹೇಳಿದ ಅವರು ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಪೊಲೀಸರ ಘನತೆಯನ್ನು ಹಾಗೂ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಹೇಳಿದರು.

"ಜನರು ಹಬ್ಬಗಳನ್ನು ಆಚರಿಸುವಾಗ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ಅವರ ಒಳ್ಳೆಯ ಕೆಲಸ ಹಾಗೂ ಬಲಿದಾನಗಳನ್ನು ದಾಖಲೀಕರಿಸಬೇಕಿದೆ.  ಸಾಕ್ಷ್ಯಚಿತ್ರಗಳನ್ನು ತಯಾರಿಸಿ ಮಕ್ಕಳಿಗೆ ಬ್ಯುರೋ ತೋರಿಸಬೇಕಿದೆ. ಕಳೆದ 75 ವರ್ಷಗಳಲ್ಲಿ 35,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ" ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News