ಜನರನ್ನೇ ಸುಲಿಯುವ ಸರಕಾರದಿಂದ ಅಭಿವೃದ್ಧಿ ಹೇಗೆ ಸಾಧ್ಯ ? : ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನೆ
ಉಡುಪಿ, ಸೆ.4: ತೆರಿಗೆ ಮೂಲಕ ಸುಲಿಗೆ, ಬೆಲೆ ಏರಿಕೆ ಮೂಲಕ ಜನರನ್ನು ಲೂಟಿ ಮಾಡುತ್ತಿರುವ ಕೇಂದ್ರ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಕುರುಡಾಗಿವೆ. ಜನರನ್ನೇ ಸುಲಿಯುವ ಸರಕಾರದಿಂದ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎನ್ನುವ ಬೇಜವಾಬ್ದಾರಿ ಹೇಳಿಕೆ ಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೀಡುತ್ತಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ. ಸಿಲಿಂಡರ್ ದರ ಏರಿಕೆ ಬೆನ್ನಲ್ಲೇ ಟೋಲ್ ದರ ಏರಿಸಿ ಹೈವೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಮತ್ತೆ 25 ರೂ. ಹೆಚ್ಚಿಸ ಲಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲೂ ಏರಿಕೆಯಾಗಿದ್ದು ಪ್ರತಿ ಸಿಲಿಂಡರ್ ಗೆ 75 ರೂ.ಗಳಷ್ಟು ಏರಿಸಲಾಗಿದೆ. ಕೇಂದ್ರ ಸರಕಾರ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನೂ ಪೂರ್ಣ ಸ್ಥಗಿತ ಗೊಳಿಸಿ ಸಿಲಿಂಡರ್ ಬೆಲೆಯನ್ನು ಕಳೆದೊಂದು ವರ್ಷದಲ್ಲಿ 290 ರೂ.ಗಳಷ್ಟು ಏರಿಕೆ ಮಾಡಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮಾತನಾಡಿದರೆ 60 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತದೆ. ಆದರೆ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಂಸ್ಥೆಗಳನ್ನು ಮಾರಿ ತಮ್ಮ ಪಕ್ಷಕ್ಕೆ ದೇಣಿಗೆ ಸಂಗ್ರಹಿಸುತ್ತಿದೆ. ಇದಕ್ಕಾಗಿಯೇ ಕೇಂದ್ರ ಸರಕಾರ 2017ರಲ್ಲಿ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದ ದೇಣಿಗೆಯ ಮೊತ್ತ ಹಾಗೂ ದಾನಿಯ ಗುರುತುಗಳನ್ನು ಪಕ್ಷಗಳು ಬಹಿರಂಗ ಪಡಿಸಬೇಕಿಲ್ಲ. ಹೀಗಾಗಿ ಪಕ್ಷ ಖಾಸಗಿಯವರಿಂದ ಕಪ್ಪುಹಣ ಪಡೆಯಲು ಯಾವುದೇ ತಡೆ ಇಲ್ಲದಂತಾಗಿದೆ ಎಂದವರು ದೂರಿದ್ದಾರೆ.
ಕೊರೋನ ಕಾರಣದಿಂದ ಆರ್ಥಿಕ ಹೊಡೆತಕ್ಕೆ ಗುರಿಯಾಗಿರುವ ಜನಸಾಮಾನ್ಯನಿಗೆ ಈಗ ಬೆಲೆ ಏರಿಕೆಯ ಬಿಸಿ ಚೆನ್ನಾಗಿ ತಟ್ಟುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪರಿಣಾಮ ಅಗತ್ಯ ವಸ್ತುಗಳು ದುಬಾರಿಯಾಗುತ್ತಿದ್ದು ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಇಂಥ ಸಂಕಷ್ಟದ ಸಮಯದಲ್ಲಿ ಜನತೆಗೆ ಆಸರೆಯಾಗಬೇಕಿದ್ದ ಸರಕಾರ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಭಾಸ್ಕರ ರಾವ್ ಕಿದಿಯೂರು ಟೀಕಿಸಿದ್ದಾರೆ.