×
Ad

ಮದುವೆಗೆ ಒಪ್ಪಿದ್ದರೂ ಮಗಳು ಸಾಕಷ್ಟು ಕಿರುಕುಳ ಅನುಭವಿಸಿದಳು: ಪ್ರಿಯಕರನಿಂದ ಕೊಲೆಗೀಡಾದ ಸೌಮ್ಯಶ್ರೀ ತಾಯಿಯ ಅಳಲು

Update: 2021-09-04 20:26 IST

ಉಡುಪಿ, ಸೆ.4: ‘ನನ್ನ ಮಗಳಿಗೆ ಮದುವೆ ಮಾಡಿಕೊಡುವಂತೆ ಐದಾರು ಬಾರಿ ಅವರ ಮನೆಗೆ ಹೋಗಿ ಕೇಳಿಕೊಂಡಿದ್ದೆವು. ಆದರೆ ಆತ ಎರಡು ವರ್ಷ ಗಳ ಕಾಲ ಮದುವೆ ಆಗುವುದಿಲ್ಲ ಹೇಳಿ ಮುಂದೂಡಿದನು. ಆತನ ಮನೆಯವರು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆತನಿಂದ ನನ್ನ ಮಗಳು ಮೂರು ವರ್ಷಗಳ ಕಾಲ ಕಿರುಕುಳ ಅನುಭವಿಸಿದಳು. ಇದನ್ನು ತಾಳಲಾರದೆ ಆಕೆ ಕೊನೆಗೆ ಬೇರೆ ಮದುವೆಗೆ ಒಪ್ಪಿಗೆ ಸೂಚಿಸಿದಳು’ ಎಂದು ಇತ್ತೀಚೆಗೆ ಪ್ರಿಯಕರನಿಂದ ಕೊಲೆಯಾದ ಸೌಮ್ಯಶ್ರೀಯ ತಾಯಿ ಪ್ರಮೀಳಾ ಭಂಡಾರಿ ಕಣ್ಣೀರಿಡುತ್ತ ಹೇಳಿದರು.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದೇಶ್ ಕುಲಾಲ್ ಮತ್ತು ನನ್ನ ಮಗಳು ಪ್ರೀತಿಸುತ್ತಿದ್ದ ವಿಚಾರ ನಮಗೆ ಮೂರು ನಾಲ್ಕು ವರ್ಷಗಳ ಹಿಂದೆ ಗೊತ್ತಾಯಿತು. ಇವರಿಬ್ಬರ ಮದುವೆಗೆ ಒಪ್ಪಿ, ಸಂದೇಶ್‌ನ ಮನೆಗೆ ಹಲವು ಬಾರಿ ಹೋಗಿ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದೆವು. ಮೊದಲು ಮಾವನಿಗೆ ಮದುವೆ ಆಗಬೇಕೆಂದು ಅವರು ಸಬೂಬು ನೀಡಿದರು. ನಂತರ ಅಣ್ಣನಿಗೆ ಮದುವೆಯಾಗಬೇಕೆಂದು ಹೇಳಿ ಮತ್ತೆ ದಿನ ಮುಂದೂಡಿದರು ಎಂದರು.

ಪೊಲೀಸ್ ಠಾಣೆಗೆ ದೂರು

‘ಇಷ್ಟೆಲ್ಲಾ ಕೇಳಿಯೂ ಸಂದೇಶ್, ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದನು. ಈ ಮಧ್ಯೆ ಆಕೆಯ ತಂದೆಗೆ ಹೃದಯಾಘಾತವಾಗಿತ್ತು. ಇನ್ನೊಮ್ಮೆ ಹೃದಯಾಘಾತ ವಾದರೆ ಅವರ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದರು. ಅದಕ್ಕೆ ನಾವು ಮತ್ತೆ ಸಂದೇಶ್ ಮನೆಯವರನ್ನು ಸಂಪರ್ಕಿಸಿ ಮದುವೆಗೆ ಒತ್ತಾಯಿಸಿದೆವು. ಅದಕ್ಕೆ ಅವರು ಎರಡು ವರ್ಷ ಬಿಟ್ಟು ಮದುವೆಯಾಗುವುದಾಗಿ ಹೇಳಿದರು. ರಿಜಿಸ್ಟಾರ್ ಮದುವೆ ಆಗುವಂತೆ ಕೇಳಿಕೊಂಡೆವು. ಅದಕ್ಕೂ ಆತ ಒಪ್ಪಲಿಲ್ಲ. ಇದರಿಂದ ನನ್ನ ಮಗಳು ಸಾಕಷ್ಟು ನೊಂದು ಕೊಂಡಳು’ ಎಂದು ಅವರು ತಿಳಿಸಿದರು.

ಹೀಗೆ ಸಂದೇಶ್, ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದನು. ಅದಕ್ಕೆ ಒಂದು ತಿಂಗಳ ಹಿಂದೆ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಅದರಂತೆ ಪೊಲೀಸರು ಆತನನ್ನು ಕರೆದು ಬುದ್ದಿ ಹೇಳಿ ಕಳುಹಿಸಿದ್ದರು ಎಂದ ಅವರು, ಮೊಬೈಲ್, ಲ್ಯಾಪ್‌ಟಾಪ್ ದುರಸ್ತಿ ಸೇರಿದಂತೆ ಎಲ್ಲ ಕೆಲಸವನ್ನು ಆತ ಅವಳಿಂದಲೇ ಮಾಡಿಸುತ್ತಿದ್ದನು. ಮದುವೆಗೆ ಒತ್ತಡ ಹಾಕಿದ್ದಕ್ಕೆ ನನ್ನ ಹತ್ತಿರ ಹಣ ಇಲ್ಲ, ಬೇಕಾದರೆ ನೀನು ಐದು ಲಕ್ಷ ರೂ. ಕೊಡು ಎಂದು ಆತ ಹೇಳಿದ್ದನು. ಆದರೂ ನನ್ನ ಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೌಮ್ಯಶ್ರೀ ಅಣ್ಣ ಸುನೀಲ್, ಅವರ ಪತ್ನಿ ನಿಕ್ಷೀತಾ, ಸಂಬಂಧಿ ಜಗದೀಶ್, ಅಶೋಕ್ ಕುಮಾರ್ ಅಲೆವೂರು, ಸೋಮಶೇಖರ್ ಭಂಡಾರಿ ಉಪಸ್ಥಿತರಿದ್ದರು.

‘ಸೆ.20ಕ್ಕೆ ಮದುವೆ ನಿಗದಿಯಾಗಿತ್ತು'

‘ಸೌಮ್ಯಶ್ರೀಗೆ ನಿಶ್ಛಿತಾರ್ಥ ಆಗಿ ಸೆ.20ಕ್ಕೆ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ಆಕೆ ಕೊಲೆಯಾಗುವ ದಿನ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ಆ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಾಲ ದುಡಿದ ಆಕೆಗೆ ಬ್ಯಾಂಕಿನಲ್ಲಿ ಬೀಳ್ಕೊಡುಗೆ ಸಮಾರಂಭ ವನ್ನು ಕೂಡ ಏರ್ಪಡಿಸಲಾಗಿತ್ತು’ ಎಂದು ಸೌಮ್ಯಶ್ರೀ ಅಣ್ಣ ಸುನೀಲ್ ತಿಳಿಸಿದರು.

ಆತ ಈ ಕೃತ್ಯ ಎಸಗುವ ಸಮಯದಲ್ಲಿ ಡ್ರಗ್ಸ್ ಸೇವನೆ ಮಾಡಿರುವ ಸಾಧ್ಯತೆ ಕೂಡ ಇದೆ. ಯಾಕೆಂದರೆ ಯಾವುದೇ ಸಾಮಾನ್ಯ ವ್ಯಕ್ತಿಗೆ ಇಂತಹ ಕೃತ್ಯ ಎಸಗಲು ಸಾಧ್ಯವೇ ಇಲ್ಲ. ಮನೆಯವರು ಸರಿಯಾಗಿ ಸ್ಪಂದಿಸಿ ಒಪ್ಪಿದ್ದರೆ ಇಂದು ಅವರಿಬ್ಬರು ಮದುವೆಯಾಗಿ ಉತ್ತಮ ಜೀವನ ನಡೆಸುತ್ತಿದ್ದರು. ಇಬ್ಬರ ಜೀವ ಕೂಡ ಉಳಿಯುತ್ತಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News