ಐಎಸ್ಐ ವರಿಷ್ಠ ಲೆ.ಜ.ಫೈಝ್ ಅಹ್ಮದ್ ಕಾಬೂಲ್ ಗೆ ಆಗಮನ
ಹೊಸದಿಲ್ಲಿ,ಸೆ.4: ಪಂಜ್ಶೀರ್ ಕಣಿವೆಯಲ್ಲಿ ತಾಲಿಬಾನ್ ಹಾಗೂ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್) ಪಡೆಗಳ ನಡುವೆ ಭೀಕರ ಕಾಳಗ ಮುಂದುವರಿದಿರುವಂತೆಯೇ, ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್ಐನ ವರಿಷ್ಠ ಲೆ.ಜ.ಫೈಝ್ ಅಹ್ಮದ್ ನೇತೃತ್ವದ ನಿಯೋಗವು ಶನಿವಾರ ಕಾಬೂಲ್ ಗೆ ಆಗಮಿಸಿದೆ.
ಮುಂದಿನ ವಾರದೊಳಗೆ ನೂತನ ಸರಕಾರದ ರಚನೆಯನ್ನು ತಾಲಿಬಾನ್ ಘೋಷಿಸಲಿರುವ ಹಿನ್ನೆಲೆಯಲ್ಲಿ ಜ.ಫೈಝ್ ಅಹ್ಮದ್ ಅವರ ಕಾಬೂಲ್ ಭೇಟಿಯು ಹೆಚ್ಚಿನ ಮಹತ್ವವನ್ನು ಪಡೆದಿದೆ.
ತಾಲಿಬಾನ್ ಆಹ್ವಾನದ ಮೇರೆಗೆ ಉಭಯದೇಶಗಳ ಭವಿಷ್ಯದ ಬಗ್ಗೆ ಚರ್ಚಿಸಲು ತಾನು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಹಾಮೀದ್ ತಿಳಿಸಿದ್ದಾರೆ. ಹಿಂದಿನ ಅಫ್ಘಾನ್ ಆಡಳಿತ ಹಾಗೂ ಅಮೆರಿಕ ಸರಕಾರದ ಆರೋಪದ ಹೊರತಾಗಿಯೂ ತಾಲಿಬಾನ್ ಗೆ ಸೇನಾ ನೆರವನ್ನು ನೀಡಿರುವುದನ್ನು ಪಾಕಿಸ್ತಾನವು ಪದೇ ಪದೇ ನಿರಾಕರಿಸುತ್ತಾ ಬಂದಿದೆ.
ಅಫ್ಘಾನಿಸ್ತಾನದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿರುವ ತಾಲಿಬಾನ್ ನನ್ನು ಪಾಕಿಸ್ತಾನವು ಬೆಳೆಸುತ್ತಾ ಹಾಗೂ ಪೋಷಿಸುತ್ತಾ ಬಂದಿದೆ ಎಂದು ಶುಕ್ರವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಹರೀಶ್ ಶಿಂಘ್ಲಾ ಅವರು ವಾಶಿಂಗ್ಟನ್ನಲ್ಲಿ ಆಪಾದಿಸಿದ್ದಾರೆ.