ಪಾಸಿಟಿವಿಟಿ ಇಳಿಕೆಗೆ ಹೆಚ್ಚಿನ ತಪಾಸಣೆ ನಡೆಸಲು ಸಿಎಂ ಸೂಚನೆ
ಮಂಗಳೂರು, ಸೆ.4: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುವವರೆಗೂ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ನಿರ್ದೇಶನ ನೀಡಿದರು.
ಶನಿವಾರ ಕೋವಿಡ್-19 ಸೋಂಕಿನ ನಿಯಂತ್ರಣ ಕುರಿತು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿ ಅವರು ಸೂಚನೆ ನೀಡಿದರು.
ಜಿಲ್ಲೆಯ ಗಡಿ ಭಾಗಗಳು, ನಗರ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ತಪಾಸಣೆ ಮಾಡಬೇಕು. ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆಗಳನ್ನು ನೀಡಬೇಕು. ಇದರಿಂದ ಕೊರೋನ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಕೊರೋನ ಸೂಚ್ಯಂಕವನ್ನು ಇಳಿಕೆ ಮಾಡುವಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂಗಳು ಜಾರಿಯಲ್ಲಿದ್ದು, ಸರಕಾರದ ಮುಂದಿನ ಆದೇಶದವರೆಗೂ ಸಾರ್ವಜನಿಕರು ಕಡ್ಡಾಯವಾಗಿ ಈ ನಿರ್ದೇಶನಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಅವರು ತಿಳಿಸಿದರು.
ಆಯಾ ದಿನಗಳಂದು ಹಂಚಿಕೆಯಾಗುವ ಲಸಿಕೆಗಳನ್ನು ಅದೇ ದಿನವೇ ನೀಡಬೇಕು. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕಂದಾಯ, ರೈಲ್ವೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳು ಹೆಚ್ಚಿನ ಗಮನಹರಿಸಿ ಸಹಕರಿಸಬೇಕು. ಜಿಲ್ಲಾಡಳಿತ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಚಾಚುತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆಯೂ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 2,240 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ.70ರಷ್ಟು ಸೋಂಕಿ ತರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಶೇ.30ರಷ್ಟು ಆಸ್ಪತೆ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ, ಜಿಲ್ಲೆಯ ಎಲ್ಲ ತಾಲೂಕುಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಇತರ ಅಧಿಕಾರಿಗಳು ಕೋವಿಡ್ ನಿಯಂತ್ರಣ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಉಪವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ವೀಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು.