ಪ್ಯಾರಾಲಿಂಪಿಕ್ಸ್: ಬೆಳ್ಳಿ ಜಯಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್

Update: 2021-09-05 02:31 GMT
photo: paralympics

ಟೋಕಿಯೊ: ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ಫೈನಲ್ ನಲ್ಲಿ  ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 (21-15, 17-21, 15-21) ಅಂತರದಿಂದ ಸೋತಿರುವ ಭಾರತದ ಐಎಎಸ್ ಅಧಿಕಾರಿ ಹಾಗೂ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆದ್ದುಕೊಂಡು ಹೊಸ ಇತಿಹಾಸ ನಿರ್ಮಿಸಿದರು.

ಸುಹಾಸ್ ಅವರು ಭಾರತಕ್ಕೆ 18ನೇ ಪದಕ ಗೆದ್ದುಕೊಟ್ಟರು. ಭಾರತವು ಈಗಾಗಲೇ 4 ಚಿನ್ನ, 7 ಬೆಳ್ಳಿ ಹಾಗೂ  6 ಕಂಚು ಜಯಿಸಿದೆ.

ರವಿವಾರ ನಡೆದ ರೋಚಕ ಪಂದ್ಯದಲ್ಲಿ  ಸುಹಾಸ್ ಮೊದಲ ಗೇಮ್ ಅನ್ನು 20 ನಿಮಿಷಗಳಲ್ಲಿ 21-15 ಗೇಮ್ ಗಳ ಅಂತರದಿಂದ ಗೆದ್ದುಕೊಂಡರು.

ತೀವ್ರ ಪೈಪೋಟಿಯಿಂದ ಕೂಡಿದ ಎರಡನೇ ಗೇಮ್ ನಲ್ಲಿ21-17 ರಿಂದ ಗೆಲುವು ಸಾಧಿಸಿದ ಮಝೂರ್ ಮರು ಹೋರಾಟ ನೀಡಿ ಪಂದ್ಯವನ್ನು ಮೂರನೇ ಗೇಮ್ ನತ್ತ ಕೊಂಡೊಯ್ದರು.  2ನೇ ಗೇಮ್ 22  ನಿಮಿಷಗಳ ಕಾಲ ನಡೆದಿತ್ತು.

ಮೂರನೇ ಗೇಮ್ ನ ಆರಂಭದಲ್ಲೇ ಶ್ರೇಯಾಂಕರಹಿತ  ಆಟಗಾರ ಸುಹಾಸ್ 3-0 ಮುನ್ನಡೆ ಪಡೆದರೂ ಮಝೂರ್ ಅವರಿಂದ ತೀವ್ರ ಪ್ರತಿರೋಧ ಎದುರಿಸಿದರು. ಸುಹಾಸ್ 3ನೇ ಗೇಮ್ ಅನ್ನು 15-21 ಅಂತರದಿಂದ ಸೋತಿದ್ದಾರೆ.

ಫೈನಲ್ ನಲ್ಲಿ ಸೋತ ಹೊರತಾಗಿಯೂ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಮೊತ್ತ ಮೊದಲ ಐಎಎಸ್ ಅಧಿಕಾರಿ ಎಂಬ ಹಿರಿಮೆಯೊಂದಿಗೆ ಇತಿಹಾಸ ಬರೆದರು.

ಪ್ಯಾರಾ ಬ್ಯಾಡ್ಮಿಂಟನ್ ನ ಎಸ್‌ಎಲ್ 4 ವಿಭಾಗದಲ್ಲಿ ಸದ್ಯ  ವಿಶ್ವ ನಂ .3 ನೇ ಆಟಗಾರನಾಗಿರುವ ಸುಹಾಸ್ ಈಗ ನಡೆಯುತ್ತಿರುವ ಗೇಮ್ಸ್‌ನಲ್ಲಿ ಶನಿವಾರದ ಸೆಮಿಫೈನಲ್ ಸೇರಿದಂತೆ ಮೂರು ಪಂದ್ಯಗಳನ್ನು ಆಡಿದ್ದಾರೆ. ಅವರು ಈ ತನಕ  ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಕರ್ನಾಟಕದ ಹಾಸನದಲ್ಲಿ 1983ರ ಜುಲೈ 2ರಂದು  ಹುಟ್ಟಿದ ಸುಹಾಸ್ ಇಂಜಿನಿಯರ್ ಪದವೀಧರರು.

ಸುರತ್ಕಲ್ ನ ಎನ್‌ಐಟಿಕೆ ಯಿಂದ ಕಂಪ್ಯೂಟರ್ ಎಂಜಿನಿಯರ್ ಆಗಿ ಪದವಿ ಪಡೆದಿರುವ ಸುಹಾಸ್, ಈ ಹಿಂದೆ ಪ್ರಯಾಗರಾಜ್, ಆಗ್ರಾ, ಅಝಮ್‌ಗಡ, ಜೌನ್‌ಪುರ, ಸೋನ್‌ಭದ್ರಾ ಜಿಲ್ಲೆಗಳ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಪ್ಯಾರಾಲಿಂಪಿಕ್ ತರಬೇತುದಾರ ಗೌರವ್ ಖನ್ನಾ ಅವರು ಯತಿರಾಜ್ ಸಮಾರಂಭದಲ್ಲಿ ಆಡುವುದನ್ನು ನೋಡಿ ಕ್ರೀಡೆಯನ್ನು ಆಯ್ದುಕೊಳ್ಳುವಂತೆ ಒತ್ತಾಯಿಸಿದರು.  ಖನ್ನಾ ಅವರ ಒತ್ತಾಯದ  ನಂತರ ಯತಿರಾಜ್ 2016 ರಲ್ಲಿ ಬ್ಯಾಡ್ಮಿಂಟನ್ ಅನ್ನು ಗಂಭೀರವಾಗಿ ತೆಗೆದುಕೊಂಡರು. ಆ ಸಮಯದಲ್ಲಿ ಅವರು ಅಝಮ್ ಗಢ ಜಿಲ್ಲಾಧಿಕಾರಿಯಾಗಿ  ಕೆಲಸ ಮಾಡುತ್ತಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News