ಅಕ್ರಮ ವ್ಯವಹಾರದ ಆರೋಪ: ಬ್ರಿಟನ್ ಯುವರಾಜನ ಆಪ್ತನ ವಿರುದ್ಧ ತನಿಖೆ

Update: 2021-09-05 16:51 GMT

ಲಂಡನ್, ಸೆ.5: ಬ್ರಿಟನ್ ಯುವರಾಜ ಚಾರ್ಲ್ಸ್ ಸ್ಥಾಪಿಸಿರುವ ದತ್ತಿ ಸಂಸ್ಥೆಯ ಅಧಿಕಾರಿ ತನ್ನ ಪ್ರಭಾವವನ್ನು ಬಳಸಿಕೊಂಡು ಸೌದಿ ಅರೆಬಿಯಾದ ಉದ್ಯಮಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ, ಅಧಿಕಾರಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಜನರಿಗೆ ಉದ್ಯೋಗ ಪಡೆಯಲು, ಸ್ವ ಉದ್ಯೋಗ ನಡೆಸಲು ನೆರವಾಗುವ ಉದ್ದೇಶದ ಸಮಾಜಸೇವಾ ಸಂಸ್ಥೆ(ದತ್ತಿಸಂಸ್ಥೆ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯುವರಾಜನಿಗೆ ಅತ್ಯಂತ ಆಪ್ತನಾಗಿದ್ದ ಮೈಕೆಲ್ ಫಾಸೆಟ್ , ತನ್ನ ಪ್ರಭಾವವನ್ನು ಬಳಸಿಕೊಂಡು ಸೌದಿಯ ಉದ್ಯಮಿ ಮಹ್ಫೂಝ್ ಮರೈ ಮಬಾರಕ್ ಬಿನ್ ಮಹ್ಫೂಝ್ಗೆ ರಾಯಲ್ ಗೌರವ ಮತ್ತು ಬ್ರಿಟನ್ ಪೌರತ್ವ ದೊರಕಿಸಿಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಉದ್ಯಮಿ ಮಹ್ಫೂಝ್ ಯುವರಾಜರ ದತ್ತಿ ಸಂಸ್ಥೆಗೆ ಬೃಹತ್ ಮೊತ್ತದ ಹಣ ದೇಣಿಗೆ ನೀಡಿದ್ದರು ಎಂದು ‘ಸಂಡೆ ಟೈಮ್ಸ್’ನಲ್ಲಿ ರವಿವಾರ ಪ್ರಕಟವಾಗಿದ್ದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪವನ್ನು ಮಹ್ಫೂಝ್ ನಿರಾಕರಿಸಿದ್ದಾರೆ.

  ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಹುದ್ದೆ ತ್ಯಜಿಸುವುದಾಗಿ ಫಾಸೆಟ್ ಸ್ವಯಂ ನಿರ್ಧರಿಸಿದ್ದು ತನಿಖೆಗೆ ನೆರವಾಗುವುದಾಗಿ ತಿಳಿಸಿದ್ದಾರೆ. ಈಗ ವಿಚಾರಣೆ ಪ್ರಗತಿಯಲ್ಲಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಯುವರಾಜ ಚಾರ್ಲ್ಸ್ ಗೆ ಅತ್ಯಂತ ಆಪ್ತನಾಗಿರುವ ಫಾಸೆಟ್, ಯುವರಾಜರು ಹಲ್ಲುಜ್ಜುವಾಗ ಬ್ರಷ್ ಗೆ ಪೇಸ್ಟ್ ಹಾಕಿಕೊಡುವುದರಿಂದ ಅವರು ದಿರಿಸು ತೊಡಲು ನೆರವಾಗುವ ಸಹಿತ ಎಲ್ಲಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. 2003ರಲ್ಲಿ ರಾಜಮನೆತನಕ್ಕೆ ದೊರಕುವ ಉಡುಗೊರೆಗಳಲ್ಲಿ ಅನಗತ್ಯವಾಗಿರುವುದನ್ನು ಮಾರಾಟ ಮಾಡುವ ಕಾರ್ಯದಲ್ಲಿ ಅವ್ಯವಹಾರ ಎಸಗಿರುವ ಆರೋಪ ಫಾಸೆಟ್ ವಿರುದ್ಧ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News