ಆಸ್ಟ್ರೇಲಿಯಾ: ನಾಪತ್ತೆಯಾಗಿದ್ದ ಮಗು 3 ದಿನದ ಬಳಿಕ ಅರಣ್ಯದಲ್ಲಿ ಪತ್ತೆ

Update: 2021-09-06 15:36 GMT
photo: twitter [video screengrab]

ಸಿಡ್ನಿ, ಸೆ.6: ಕಳೆದ ಶುಕ್ರವಾರದಿಂದ ತನ್ನ ಮನೆಯ ಬಳಿಯಿಂದ ನಾಪತ್ತೆಯಾಗಿದ್ದ ಆಟಿಸಂ(ಸ್ವಲೀನತೆ) ಸಮಸ್ಯೆಯಿಂದ ಬಳಲುತ್ತಿದ್ದ 3 ವರ್ಷದ ಬಾಲಕನನ್ನು ಸೋಮವಾರ ಮನೆಯಿಂದ ಸುಮಾರು 470 ಮೀಟರ್ ದೂರದ ಅರಣ್ಯದಲ್ಲಿ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆಟಿಂಸ ಸಮಸ್ಯೆಯಿದ್ದ ಮತ್ತು ಮೂಗನಾಗಿದ್ದ ಆ್ಯಂಟನಿ ‘ಎಜೆ’ ಎಲ್ಫಲಕ್ ಎಂಬ ಬಾಲಕ ಶುಕ್ರವಾರ ಬೆಳಿಗ್ಗೆ ಉತ್ತರ ಸಿಡ್ನಿಯ ಪುಟ್ಟಿ ಎಂಬ ಗ್ರಾಮದ ತನ್ನ ಮನೆಯ ಬಳಿಯಿಂದ ನಾಪತ್ತೆಯಾಗಿದ್ದ. 

ಈತನ ಪತ್ತೆಗಾಗಿ ಪೊಲೀಸರು ಹೆಲಿಕಾಪ್ಟರ್ ಮೂಲಕ ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ಸೋಮವಾರ ಅರಣ್ಯದ ಬಳಿಯ ಹಳ್ಳದಲ್ಲಿ ತನ್ನ ಬೊಗಸೆಯಿಂದ ನೀರು ಕುಡಿಯುತ್ತಿದ್ದ ಎಲ್ಫಲಕ್ ನನ್ನು ಪತ್ತೆಹಚ್ಚಲಾಗಿದೆ. ಈತ 3 ದಿನದಿಂದ ನೀರು ಕುಡಿದು ಜೀವ ಉಳಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ಎಲ್ಫಲಕ್ ನ ಮೈಮೇಲೆ ತರಚು ಗಾಯ ಹಾಗೂ ಇರುವೆ ಕಚ್ಚಿದ ಗಾಯಗಳಿದ್ದವು ಎಂದು ಆತನ ತಂದೆ ಆ್ಯಂಟನಿ ಎಲ್ಫಲಕ್ ಹೇಳಿದ್ದಾರೆ. ಬಾಲಕನ ಆರೋಗ್ಯಸ್ಥಿತಿ ಸ್ಥಿರವಾಗಿದ್ದರೂ ಆತನಿಗೆ ಪ್ರಾಥಮಿಕ ಚಿಕಿತ್ಸೆಯ ಅಗತ್ಯವಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಟ್ರೇಸಿ ಚಾಪ್ಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News