ಶಾರ್ದೂಲ್ ಠಾಕೂರ್ ಕೂಡ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಅರ್ಹರಿದ್ದಾರೆ: ರೋಹಿತ್ ಶರ್ಮಾ

Update: 2021-09-07 05:58 GMT

ದಿ ಓವಲ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ್ದ ಶಾರ್ದೂಲ್ ಠಾಕೂರ್ ಅವರ ಜೊತೆಯಲ್ಲಿ ನನ್ನನ್ನು 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಹೆಸರಿಸಬೇಕಿತ್ತು ಎಂದು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಎರಡನೇ ಇನಿಂಗ್ಸ್ ನಲ್ಲಿ ಶತಕ(127)ಗಳಿಸಿದ್ದ ಮುಂಬೈ ಬ್ಯಾಟ್ಸ್ ಮನ್ ರೋಹಿತ್ ರನ್ನು 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧ 4ನೇ ಪಂದ್ಯವನ್ನು 157 ರನ್ ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈಗ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಕೆನ್ನಿಂಗ್ಟನ್ ಓವಲ್‌ನಲ್ಲಿ ಸೋಮವಾರ ನಡೆದ ನಾಲ್ಕನೇ ಟೆಸ್ಟ್‌ನ ಕೊನೆಯ ದಿನದಂದು ಭಾರತೀಯ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು ಜಸ್‌ಪ್ರೀತ್ ಬುಮ್ರಾ ಅವರ ಅದ್ಭುತ ಬೌಲಿಂಗ್ ಹಾಗೂ ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡ್ ಪ್ರದರ್ಶನವು ಪ್ರವಾಸಿಗರಿಗೆ ಇಂಗ್ಲೆಂಡ್ ಅನ್ನು 157 ರನ್ನುಗಳಿಂದ ಸೋಲಿಸಲು ಸಹಾಯ ಮಾಡಿತು.

ನಾಲ್ಕನೇ ಟೆಸ್ಟ್‌ನಲ್ಲಿ, ಶಾರ್ದೂಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ಗಳಿಸಿದರು ಹಾಗೂ  ಅವರು ಇಂಗ್ಲೆಂಡ್‌ನ ಬ್ಯಾಟಿಂಗ್ ಕುಸಿತಕ್ಕೆ, ಟೀಮ್ ಇಂಡಿಯಾದ ಗೆಲುವಿಗೆ ಕಾರಣವಾದರು. ಇಂಗ್ಲೆಂಡಿನ  ಎರಡನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಸೇರಿದಂತೆ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು.

"ಶಾರ್ದೂಲ್  ಪಂದ್ಯ ಗೆಲ್ಲುವ ನಿಟ್ಟಿನಲ್ಲಿ  ಭಾರೀ  ಪ್ರಯತ್ನಪಟ್ಟಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಅವರು ನೀಡಿದ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದರು. ಇಂಗ್ಲೆಂಡ್  ರನ್ ಚೇಸಿಂಗ್ ವೇಳೆ ವಿಕೆಟ್  ನಷ್ಟವಿಲ್ಲದೆ 100 ರನ್‌ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್ ಮನ್  ರೋರಿ ಬರ್ನ್ಸ್(50) ವಿಕೆಟ್ ಪಡೆದು  ತಂಡಕ್ಕೆ ನಿರ್ಣಾಯಕ ಮೇಲುಗೈ ಒದಗಿಸಿಕೊಟ್ಟರು. ತದನಂತರ ನಾಯಕ ಜೋ ರೂಟ್ ಅವರ ವಿಕೆಟ್ ಪಡೆದು ಗೆಲುವನ್ನು ಖಚಿತಪಡಿಸಿದರು" ಎಂದು ರೋಹಿತ್ ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News