ಕಾಬೂಲ್: ಪಾಕ್ ವಿರುದ್ಧ ಸ್ಥಳೀಯರ ಪ್ರತಿಭಟನೆ; ಗುಂಡು ಹಾರಿಸಿ ಚದುರಿಸಿದ ತಾಲಿಬಾನ್ ಪಡೆ

Update: 2021-09-07 17:46 GMT

 ಕಾಬೂಲ್, ಸೆ.7: ಅಫ್ಘಾನಿಸ್ತಾನದ ಆಂತರಿಕ ವ್ಯವಹಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ ಕಾಬೂಲ್ ನ ಪಾಕ್ ರಾಯಭಾರ ಕಚೇರಿಯೆದುರು ಮಂಗಳವಾರ ನಡೆದ ಪ್ರತಿಭಟನಾ ರ್ಯಾಲಿಯನ್ನು ಚದುರಿಸಲು ತಾಲಿಬಾನ್ ಪಡೆ ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

 ಬಹುತೇಕ ಮಹಿಳೆಯರಿದ್ದ ನೂರರಷ್ಟು ಪ್ರತಿಭಟನಾಕಾರರು ‘ಪಾಕ್ನ ಕೈಗೊಂಬೆ ಸರಕಾರ ನಮಗೆ ಬೇಕಿಲ್ಲ’, ‘ಪಾಕಿಸ್ತಾನಕ್ಕೆ ಸಾವು’, ‘ಪಾಕಿಸ್ತಾನ ಅಫ್ಗಾನ್ನಿಂದ ತೊಲಗಲಿ’ ಮುಂತಾದ ಘೋಷಣೆ ಕೂಗುತ್ತಿರುವ ವೀಡಿಯೊವನ್ನು ಸ್ಥಳೀಯ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.


ಪಂಜ್ಶಿರ್ ಪ್ರಾಂತ್ಯವನ್ನು ತಾಲಿಬಾನ್ ಕೈವಶ ಮಾಡಿಕೊಳ್ಳಲು ಪಾಕಿಸ್ತಾನದ ವಾಯುಪಡೆ ನೆರವಾಗಿದೆ ಎಂದು ವರದಿಯಾಗಿತ್ತು. ಜೊತೆಗೆ, ಕೆಲ ದಿನಗಳ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ. ಜ. ಫಯಾಝ್ ಹಮೀದ್ ದಿಢೀರನೆ ಕಾಬೂಲ್ಗೆ ಆಗಮಿಸಿ ಅಫ್ಘಾನ್ನಲ್ಲಿ ನೂತನ ಸರಕಾರ ಸ್ಥಾಪಿಸುವ ಬಗ್ಗೆ ತಾಲಿಬಾನ್ ಮುಖಂಡರೊಂದಿಗೆ ಚರ್ಚಿಸಿದ್ದರು. ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವ ಮೂಲಕ ಕುಖ್ಯಾತಿ ಪಡೆದಿರುವ ಐಎಸ್ಐ ಇದೀಗ ಅಫ್ಘಾನ್ನ ನೂತನ ಸರಕಾರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿರುವುದು ಅಫ್ಗಾನ್ ವ್ಯವಹಾರದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ಸ್ಪಷ್ಟ ನಿದರ್ಶನಗಳಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ತಾಲಿಬಾನ್ ಪಡೆ ಗಾಳಿಯಲ್ಲಿ ಗುಂಡು ಹಾರಿಸಿದೆ. ಇಸ್ಲಾಮಿಕ್ ಸರಕಾರ ನಮ್ಮ ಬಡಜನರತ್ತ ಗುಂಡಿನ ದಾಳಿ ನಡೆಸುತ್ತಿದೆ. ಇವರು(ತಾಲಿಬಾನ್ ಗಳು) ಮನುಷ್ಯರೇ ಅಲ್ಲ’ ಎಂದು ಪ್ರತಿಭಟನಾ ರ್ಯಾಲಿಯಲ್ಲಿದ್ದ ಮಹಿಳೆಯೊಬ್ಬರು ಹತಾಶೆಯಿಂದ ಉದ್ಗರಿಸುವ ವೀಡಿಯೊವನ್ನು ಅಸ್ವಾಕಾ ಸುದ್ಧಿಸಂಸ್ಥೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.

ಪತ್ರಕರ್ತರ ಬಂಧನ

ಪ್ರತಿಭಟನಾ ರ್ಯಾಲಿಯ ಬಗ್ಗೆ ವರದಿ ಮಾಡುತ್ತಿದ್ದ ಕೆಲವು ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ರ್ಯಾಲಿಯ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಟೋಲೊ ನ್ಯೂಸ್ ನ ವರದಿಗಾರ ವಹೀದ್ ಅಹ್ಮದಿಯನ್ನು ತಾಲಿಬಾನ್ ಬಂಧಿಸಿದೆ. ನಮ್ಮ ಸಹೋದ್ಯೋಗಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ತಾಲಿಬಾನ್ಗೆ ಆಗ್ರಹಿಸಲಾಗಿದೆ ಎಂದು ಟೋಲೊ ನ್ಯೂಸ್ ಮುಖ್ಯಸ್ಥ ನಜಫಿಝಾದ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News