×
Ad

ಎರಡು ತಿಂಗಳು ಕೇರಳ ಪ್ರವೇಶ, ಆಗಮನಕ್ಕೆ ನಿರ್ಬಂಧ : ದ.ಕ. ಜಿಲ್ಲಾಧಿಕಾರಿ ಆದೇಶ

Update: 2021-09-08 23:02 IST

ಮಂಗಳೂರು, ಸೆ.8 : ಕೇರಳದಲ್ಲಿ ಕೊರೋನ ಮತ್ತು ನಿಫಾ ವೈರಸ್ ಹರಡುತ್ತಿರುವುದರಿಂದ ಕೇರಳ ಕಡೆಯಿಂದ ಬರುವವರನ್ನು ಮತ್ತು ಅಲ್ಲಿಗೆ ತೆರಳುವವರನ್ನು ಸಂಪೂರ್ಣವಾಗಿ ಎರಡು ತಿಂಗಳ ಕಾಲ ನಿರ್ಬಂಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮುಂದಿನ ಎರಡು ತಿಂಗಳ ಕಾಲ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ಯಾರಾ ಮೆಡಿಕಲ್, ನರ್ಸಿಂಗ್ ಇನ್ನಿತರ ಉದ್ದೇಶಕ್ಕಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಅಕ್ಟೋಬರ್ ಅಂತ್ಯದ ವರೆಗೆ ಮಂಗಳೂರಿಗೆ ಬರುವಂತಿಲ್ಲ. ಈ ಬಗ್ಗೆ ಈಗಾಗಲೇ ಕೇರಳದಲ್ಲಿದ್ದವರಿಗೆ ಆಯಾ ಶಿಕ್ಷಣ ಸಂಸ್ಥೆಗಳು ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಕೇರಳಕ್ಕೆ ತೆರಳುವ ಉದ್ದೇಶ ಇದ್ದವರು ಕೂಡ ತಮ್ಮ ಪ್ರಯಾಣವನ್ನು ಅಕ್ಟೋಬರ್ ಅಂತ್ಯದ ವರೆಗೆ ಮುಂದೂಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಅಲ್ಲದೆ, ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳು, ಕಚೇರಿಗಳು, ಹೊಟೇಲ್ ಗಳು, ಕೈಗಾರಿಕೆಗಳು ಇದ್ಯಾದಿ ಎಲ್ಲ ರೀತಿಯ ಉದ್ಯೋಗದಾತರು ತಮ್ಮ ಕೇರಳ ಮೂಲದ ಸಿಬಂದಿಗಳನ್ನು ಯಾವುದೇ ಕಾರಣಕ್ಕೂ ಕರ್ನಾಟಕ ಪ್ರವೇಶ ಮಾಡದಂತೆ ಸೂಚಿಸಿದ್ದಾರೆ. ಅಲ್ಲದೆ, ಕೇರಳಕ್ಕೆ ಪ್ರಯಾಣಿಸದಂತೆ ನಿರ್ಬಂಧ ವಿಧಿಸಲು ಕೈಗಾರಿಕೆ ಇನ್ನಿತರ ಕಂಪನಿಗಳ ಮಾಲಕರಿಗೆ ಸೂಚಿಸಿದ್ದಾರೆ. ಅದೇ ರೀತಿ, ಸಾರ್ವಜನಿಕರು ಯಾವುದೇ ತುರ್ತು ಕಾರಣಗಳಿಲ್ಲದೇ ಇದ್ದಲ್ಲಿ ಅಕ್ಟೋಬರ್ ಅಂತ್ಯದ ವರೆಗೆ ಕೇರಳ ರಾಜ್ಯಕ್ಕೆ ಪ್ರಯಾಣಿಸಕೂಡದು ಎಂದು ತಮ್ಮ ಆದೇಶದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News