ಇಥಿಯೋಪಿಯಾ: ಟಿಗ್ರೆ ಪಡೆಯಿಂದ 120ಕ್ಕೂ ಅಧಿಕ ಜನರ ಹತ್ಯೆ: ಸರಕಾರದ ಹೇಳಿಕೆ

Update: 2021-09-09 17:54 GMT

ಅದ್ದೀಸ್ ಅಬಾಬ, ಸೆ.9: ಯುದ್ಧರಂಗದಲ್ಲಿ ಉಂಟಾದ ಸೋಲಿನ ಹತಾಶೆಯಲ್ಲಿ ಇಥಿಯೋಪಿಯಾದ ಟಿಗ್ರೆ ಪಡೆಗಳು 120ಕ್ಕೂ ಅಧಿಕ ಅಮಾಯಕ ಜನರನ್ನು ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಆಗಸ್ಟ್ 27ರಂದು ಟಿಗ್ರೆ ಪಡೆಗಳು ಗೊಂಡಾರ್ ನಗರವನ್ನು ಕೈವಶ ಮಾಡಿಕೊಳ್ಳಲು ನಡೆಸಿದ ಪ್ರಯತ್ನವನ್ನು ಇಥಿಯೋಪಿಯಾ ಪಡೆ ವಿಫಲಗೊಳಿಸಿ ಅವರನ್ನು ಹಿಮ್ಮೆಟ್ಟಿಸಿತ್ತು. ಇದರಿಂದ ಹತಾಶೆಗೊಂಡ ಟಿಗ್ರೆ ಪಡೆ ಚಿನ್ನಾಖ್ ಟೆಕ್ಲೆಹೆಮನೋಟ್ ಗ್ರಾಮದ ಮೇಲೆರಗಿ ಮಕ್ಕಳು, ಮಾತೆಯರು, ಹಿರಿಯ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಮನೆಗೆ ನುಗ್ಗಿ ವ್ಯಾಪಕ ಲೂಟಿ, ಗುಂಡಿನ ದಾಳಿ ನಡೆಸಿದೆ. ಗ್ರಾಮದಲ್ಲಿ 123 ಮೃತದೇಹ ಪತ್ತೆಯಾಗಿದ್ದು ಮೃತಪಟ್ಟವರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ದಬತ್ ವೊರೆಡ ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೆಲವು ಟಿಗ್ರೆ ಸದಸ್ಯರು ಹೊಲದಲ್ಲಿ ಅಡಗಿಕೊಂಡು ಗ್ರಾಮಸ್ಥರ ಮೇಲಿನ ದಾಳಿ ಮುಂದುವರಿಸಿದ್ದಾರೆ. ಮೃತರ ಸಂಖ್ಯೆ 200ನ್ನೂ ದಾಟಬಹುದು ಎಂದು ನಾರ್ಥ್ ಗೊಂಡಾರ್ ಪ್ರಾಂತ್ಯದ ಆರೋಗ್ಯ ಕಾರ್ಯಾಲಯದ ಮುಖ್ಯಸ್ಥ ಬೆಕೆಲೆ ಯಿಟ್‌ಬರೆಕ್ ಹೇಳಿದ್ದಾರೆ.

 ಇಥಿಯೋಪಿಯದ ಟಿಗ್ರೆ ವಲಯದಲ್ಲಿ ಆರಂಭವಾದ ಅಂತರ್ಯುದ್ಧ ಕ್ರಮೇಣ ಇತರ ಪ್ರಾಂತ್ಯಕ್ಕೂ ವ್ಯಾಪಿಸಿದ್ದು ಸಾವಿರಾರು ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ. ಟಿಗ್ರೆ ವಲಯಕ್ಕೆ ಆಹಾರ ಮತ್ತು ಇತರ ಅಗತ್ಯವಸ್ತುಗಳ ಪೂರೈಕೆಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಲು ತಾನು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಆದರೆ ಹಿಂಸಾಚಾರದ ಆರೋಪ ಸರಿಯಲ್ಲ ಎಂದು ಟಿಗ್ರೆ ಪಡೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News