2017ರಿಂದ ಕಾಂಗ್ರೆಸ್ ತ್ಯಜಿಸಿದವರು ಅತ್ಯಧಿಕ: ವರದಿ

Update: 2021-09-09 18:30 GMT

ಹೈದರಾಬಾದ್, ಸೆ. 4: 2014ರ ಬಳಿಕ ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಅನ್ನು ಅತ್ಯಧಿಕ ಸಂಖ್ಯೆಯ ಚುನಾವಣಾ ಅಭ್ಯರ್ಥಿಗಳು, ಸಂಸದರು ಹಾಗೂ ಶಾಸಕರು ತ್ಯಜಿಸಿದ್ದಾರೆ.

ಆದರೆ, ಬಿಜೆಪಿಗೆ ಅತ್ಯಧಿಕ ನಾಯಕರು ಸೇರ್ಪಡೆಯಾಗಿದ್ದಾರೆ ಎಂದು ಗುರುವಾರ ಬಿಡುಗಡೆಯಾದ ವರದಿಯೊಂದು ಹೇಳಿದೆ. 2014-2017ರ ನಡುವೆ ನಡೆದ ಚುನಾವಣೆ ಸಂದರ್ಭ ಒಟ್ಟು 222 ಚುನಾವಣಾ ಅಭ್ಯರ್ಥಿಗಳು ಇತರ ಪಕ್ಷಗಳಿಗೆ ಸೇರ್ಪಡೆಯಾಗಲು ಕಾಂಗ್ರೆಸ್ ತ್ಯಜಿಸಿದ್ದಾರೆ. ಇದೇ ಅವಧಿಯಲ್ಲಿ 177 ಸಂಸದರು ಹಾಗೂ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ಅಭ್ಯರ್ಥಿಗಳ ಚುನಾವಣಾ ಅಫಿಡಾವಿಟ್ ವಿಶ್ಲೇಷಣೆ ನಡೆಸಿದ ನ್ಯಾಷನಲ್ ಇಲೆಕ್ಷನ್ ವಾಚ್ ಹಾಗೂ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಬಹಿರಂಗಪಡಿಸಿದೆ.

2014ರಿಂದ ಚುನಾವಣೆ ಸಂದರ್ಭ ಬಿಜೆಪಿಯನ್ನು 111ಕ್ಕೂ ಅಧಿಕ ಚುನಾವಣಾ ಅಭ್ಯರ್ಥಿಗಳು ಹಾಗೂ 33 ಸಂಸದರು, ಶಾಸಕರು ತ್ಯಜಿಸಿ ಇತರ ಪಕ್ಷ ಸೇರಿದ್ದಾರೆ. ಇತರ ಪಕ್ಷಗಳ ಒಟ್ಟು 253 ಅಭ್ಯರ್ಥಿಗಳು, 173 ಸಂಸದರು ಹಾಗೂ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು ಬಿಜೆಪಿಗೆ ಅತಿ ದೊಡ್ಡ ಲಾಭ ತಂದಿದೆ. ಕಳೆದ 7 ವರ್ಷಗಳಲ್ಲಿ ಕಾಂಗ್ರೆಸ್‌ಗೆ 399 ನಾಯಕರು ರಾಜೀನಾಮೆ ನೀಡಿ ಇತರ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಆದರೆ, 115 ಅಭ್ಯರ್ಥಿಗಳು, 61 ಸಂಸದರು ಹಾಗೂ ಶಾಸಕರು ಕಾಂಗ್ರೆಸ್ ಸೇರಿದ್ದಾರೆ. 2014ರ ಬಳಿಕ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯ ಸಂದರ್ಭ ಪಕ್ಷ ಬದಲಾಯಿಸಿದ ಹಾಗೂ ಚುನಾವಣೆಗೆ ಮರು ಸ್ಪರ್ಧಿಸಿದ 1133 ಅಭ್ಯರ್ಥಿಗಳು 500 ಸಂಸದರು ಹಾಗೂ ಶಾಸಕರ ಚುನಾವಣಾ ಅಫಿಡಾವಿಟ್ ಅನ್ನು ವಿಶ್ಲೇಷಣೆ ನಡೆಸಿದ ನ್ಯಾಶನಲ್ ಇಲೆಕ್ಷನ್ ವಾಚ್-ಎಡಿಆರ್‌ನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News