×
Ad

ಪಣಂಬೂರಿನಲ್ಲಿ ಗಿಲ್ ನೆಟ್ ಬೋಟ್ ಅವಘಡ: ಮೀನುಗಾರ ನಾಪತ್ತೆ

Update: 2021-09-11 09:22 IST

ಮಂಗಳೂರು, ಸೆ.11:ಮೀನುಗಾರಿಕೆಗೆ ತೆರಳಿದ್ದ ಗಿಲ್‌ನೆಟ್ ಬೋಟ್‌ವೊಂದು ಪಣಂಬೂರು ಕಡಲತೀರದ ಸಮೀಪ ಅವಘಡಕ್ಕೆ ಈಡಾಗಿದೆ. ಪರಿಣಾಮ ಮೀನುಗಾರ ನಾಪತ್ತೆಯಾದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.

ಕಸಬಾ ಬೆಂಗರೆಯ ನಿವಾಸಿ ಮುಹಮ್ಮದ್ ಶರೀಫ್ (35) ನಾಪತ್ತೆಯಾದ ಮೀನುಗಾರ ಎಂದು ತಿಳಿದುಬಂದಿದೆ. ಬೋಟಿನಲ್ಲಿದ್ದ ಇನ್ನುಳಿದ ಕಸಬಾ ಬೆಂಗರೆಯ ಅಬ್ದುಲ್ ಅಝೀಝ್, ಇಮ್ತಿಯಾಝ್, ಸಿನಾನ್, ಫೈರೋಝ್ ಎಂಬವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಘಟನೆಯು ಪಣಂಬೂರು ಕಡಲತೀರದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ನಡೆದಿದೆ ಎನ್ನಲಾಗಿದೆ. ಈ ಐವರು ಮೀನುಗಾರರು ಶುಕ್ರವಾರ ಸಂಜೆ ವೇಳೆ ಗಿಲ್‌ನೆಟ್ ಬೋಟಿನಲ್ಲಿ ತೆರಳಿ ಮೀನಿಗಾಗಿ ಬಲೆ ಬೀಸಿ ವಾಪಸಾಗಿದ್ದರು. ಬಲೆ ಹಾಕಿದ್ದ ಮೀನನ್ನು ತೆಗೆದುಕೊಂಡು ಬರಲು ಶನಿವಾರ ನಸುಕಿನಜಾವ 5 ಗಂಟೆ ಸುಮಾರಿಗೆ ಪುನಃ ಕಡಲಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅವಘಡಕ್ಕೆ ಈಡಾದ ‘‘ಎಫ್.ಎನ್. ಚಿಲ್‌ಡ್ರನ್ಸ್’’ ಹೆಸರಿನ ಗಿಲ್ ನೆಟ್ ಬೋಟ್ ಅಝರ್ ಎಂಬವರ ಮಾಲಕತ್ವದ್ದು ಎಂದು ಹೇಳಲಾಗಿದೆ. ದೋಣಿಯನ್ನು ದಡಕ್ಕೆ ತರಲಾಗಿದೆ. ನಾಪತ್ತೆಯಾದ ಮೀನುಗಾರ ಶರೀಫ್‌ಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಕರಾವಳಿ ರಕ್ಷಣಾ ಪಡೆ ಹಾಗೂ ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೀನುಗಾರ ನಾಪತ್ತೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ಆಧಾರಸ್ತಂಭವಾಗಿದ್ದ: ನಾಪತ್ತೆಯಾದ ಮುಹಮ್ಮದ್ ಶರೀಫ್ ಹಲವು ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿದ್ದರು. ಮನೆಯ ಆರ್ಥಿಕ ಸ್ಥಿತಿ ತೀರಾ ಬಡತನದಲ್ಲಿದೆ. ಮನೆಗೆ ಈತನೇ ಆಧಾರಸ್ತಂಭವಾಗಿದ್ದ. ಈತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈತ ನಾಪತ್ತೆಯಾಗಿರುವುದು ಮನೆಯವರಲ್ಲಿ ಬಹಳಷ್ಟು ಆತಂಕ ಮಡುಗಟ್ಟಿದೆ ಎನ್ನುತ್ತಾರೆ ನಾಪತ್ತೆಯಾದ ಶರೀಫ್ ಅವರ ಸಂಬಂಧಿಗಳು.

ದಕ್ಕೆಯಲ್ಲಿ ಕೆಲಸವಿಲ್ಲವೆಂದು ಮೀನುಗಾರಿಕೆಗೆ ತೆರಳಿದ್ದ: ದೋಣಿ ಅವಘಡದಲ್ಲಿ ಬದುಕಿ ಬಂದವರ ಪೈಕಿ ಅಬ್ದುಲ್ ಅಝೀಝ್ ಅವರು ಕ್ಕೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲಸವಿಲ್ಲದೆ ಮನೆಯಲ್ಲಿದ್ದ ಕಾರಣ ಮೀನುಗಾರಿಕೆಗೆ ತೆರಳುತ್ತಿದ್ದರು. ಎಂದಿನಂತೆ ಶುಕ್ರವಾರವೂ ಮೀನಿಗೆ ಬಲೆ ಬೀಸಿ ಬಂದಿದ್ದರು. ಶನಿವಾರ ನಸುಕಿನಜಾವ ಪುನಃ ತೆರಳಿದಾಗ ದುರ್ಘಟನೆ ನಡೆದಿದೆ. ನಾಪತ್ತೆಯಾದ ಶರೀಫ್ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಸರಕಾರವು ಮೀನುಗಾರರಿಗೆ ಹೆಚ್ಚಿನ ಪರಿಹಾರ ನೀಡುವಂತಾಗಲಿ ಎನ್ನುತ್ತಾರೆ ಅಬ್ದುಲ್ ಅಝೀಝ್ ಅವರ ಪೋಷಕರು.

ಇಲಾಖೆಗೆ ವರದಿ ರವಾನೆ: ಮೀನುಗಾರಿಕೆಗೆ ತೆರಳಿದ್ದವರ ಪೈಕಿ ಓರ್ವ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸಂತ್ರಸ್ತನ ಕುಟುಂಬದವರು ಈಗಾಗಲೇ ತಮ್ಮನ್ನು ಭೇಟಿ ಮಾಡಿ, ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವರದಿಯನ್ನು ಇಲಾಖೆಯ ನಿರ್ದೇಶಕರಿಗೆ ರವಾನಿಸಲಾಗಿದೆ. ಇಲಾಖೆಯಿಂದ ನಿಯಮಾನುಸಾರ ಸಿಗಬಹುದಾದ ಪರಿಹಾರ-ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು. ಹೆಚ್ಚಿನ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಹರೀಶ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಸಮುದ್ರ ಪ್ರಕ್ಷಬ್ಧ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರನ ರಕ್ಷಣಾ ಕಾರ್ಯಕ್ಕೆ ಬೋಟ್‌ವೊಂದರಲ್ಲಿ ಮುಳುಗುತಜ್ಞರು ಸಹಿತ ಸ್ಥಳೀಯ ಮೀನುಗಾರರ ತೆರಳಿದ್ದಾರೆ. ಸದ್ಯ ಶೋಧ ಕಾರ್ಯ ತಾತ್ಕಾಲಿಕವಾಗಿ ರದ್ದುಗೊಂಡಿದೆ. ಅರಬಿ ಸಮುದ್ರದಲ್ಲಿ ವಾತಾವರಣ ಭಾರೀ ಪ್ರಕ್ಷುಬ್ಧತೆಯಿಂದ ಕೂಡಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡೆತಡೆ ಉಂಟಾಗಿದೆ. ಹಾಗಾಗಿ ರಾತ್ರಿ ವೇಳೆ ಸಮುದ್ರದ ಅಲೆಗಳ ಆರ್ಭಟ ಕ್ಷೀಣಿಸುವ ಸಾಧ್ಯತೆ ಇದೆ. ಈ ವೇಳೆ ಹುಡುಕಾಟ ನಡೆಸಲಾಗುವುದು. ಮರುದಿನವೂ (ರವಿವಾರ) ನಾಪತ್ತೆಯಾದ ಮೀನುಗಾರನಿಗಾಗಿ ಪತ್ತೆ ಕಾರ್ಯಾಚರಣೆ ನಡೆಯಲಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News