"ವಕೀಲರ ಜತೆ ಮಾತನಾಡುವಂತಿಲ್ಲ ಎಂದು ಹೇಳಲಾಯಿತು": ಐಟಿ ʼಸಮೀಕ್ಷೆ' ಬಳಿಕ ಪ್ರತಿಕ್ರಿಯಿಸಿದ ನ್ಯೂಸ್‍ಲಾಂಡ್ರಿ ಸಹಸ್ಥಾಪಕ

Update: 2021-09-11 06:07 GMT
Photo: wikipedia

ಹೊಸದಿಲ್ಲಿ: ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ʼಸಮೀಕ್ಷೆ' ಎಂದು ಹೇಳಿಕೊಂಡು ಡಿಜಿಟಲ್ ಸುದ್ದಿ ತಾಣಗಳಾದ ನ್ಯೂಸ್‍ಕ್ಲಿಕ್ ಹಾಗೂ ನ್ಯೂಸ್‍ಲಾಂಡ್ರಿ ಕಚೇರಿಗಳಲ್ಲಿ ಶುಕ್ರವಾರ 12 ಗಂಟೆಗಳಿಗೂ ಹೆಚ್ಚು ಸಮಯ ಕಳೆದ ನಂತರದ ಬೆಳವಣಿಗೆಯಲ್ಲಿ ಟ್ವೀಟ್ ಮಾಡಿರುವ ನ್ಯೂಸ್‍ಲಾಂಡ್ರಿ ಸಹಸ್ಥಾಪಕ ಅಭಿನಂದನ್ ಸೆಖ್ರಿ "ವಕೀಲರ ಜತೆ ಮಾತನಾಡುವ ಹಾಗಿಲ್ಲ ಎಂದು ನನಗೆ ಹೇಳಲಾಯಿತು, ಕಾನೂನು ಸಲಹೆ ಪಡೆಯದೆಯೇ ಕಾನೂನಿನಂತೆ ನಡೆದುಕೊಳ್ಳಬೇಕು ಎಂದು ಹೇಳಲಾಯಿತು" ಎಂದಿದ್ದಾರೆ.

"ನನ್ನ ಫೋನ್  ಹಸ್ತಾಂತರಿಸುವಂತೆ ಸೂಚಿಸಲಾಯಿತು ಹಾಗೂ ನನ್ನ ವೈಯಕ್ತಿಕ ಇಲೆಕ್ಟ್ರಾನಿಕ್ ಸಾಧನಗಳಿಂದ ಡೇಟಾ ಡೌನ್‍ಲೋಡ್ ಮಾಡಲಾಗಿದೆ. ನನ್ನ ಪ್ರಕಾರ ಇದು ನನ್ನ ಮೂಲಭೂತ ಹಕ್ಕಾದ ಖಾಸಗಿತನದ ಉಲ್ಲಂಘನೆಯಾಗಿದೆ" ಎಂದು ಅವರು ಬರೆದಿದ್ದಾರೆ.

"ಆದಾಯ ತೆರಿಗೆ ಇಲಾಖೆಯ ಒಂದು ತಂಡ ನ್ಯೂಸ್‍ಲಾಂಡ್ರಿಯ ನೋಂದಾಯಿತ ಕಚೇರಿಗೆ ಸೆಪ್ಟೆಂಬರ್ 10ರಂದು ಸರಿಸುಮಾರು ಅಪರಾಹ್ನ 12.15ಕ್ಕೆ ಆಗಮಿಸಿ ಸೆಕ್ಷನ್ 133ಎ ಅನ್ವಯ ʼಸಮೀಕ್ಷೆ' ನಡೆಸಿದೆ. ಸೆಪ್ಟೆಂಬರ್ 11ರಂದು ರಾತ್ರಿ 12.40ಕ್ಕೆ ಅವರು ಕಚೇರಿಯಿಂದ ಹೊರ ಹೋದರು. ನನ್ನ ಫೋನ್ ಹಸ್ತಾಂತರಿಸುವಂತೆ ಹಾಗೂ ವಕೀಲರ ಜತೆ ಮಾತನಾಡುವ ಹಾಗಿಲ್ಲ ಎಂದು ನನಗೆ ಹೇಳಲಾಯಿತು" ಎಂದು ಅವರು ಬರೆದಿದ್ದಾರೆ.

"ಕಾನೂನು ಸಲಹೆ ಪಡೆಯದೆಯೇ  ಆದೇಶ ಪಾಲನೆಯಾಗಬೇಕೆಂದು ಹೇಳಲಾಯಿತು. ನನ್ನ ಎಲ್ಲಾ ಕಂಪ್ಯೂಟರ್ ಗಳಲ್ಲಿ ಅವರು ಜಾಲಾಡಿದ್ದಾರೆ. ನನ್ನ ಮೊಬೈಲ್ ಫೋನ್, ಲ್ಯಾಪ್‍ಟಾಪ್ ಹಾಗೂ ಒಂದೆರಡು ಕಚೇರಿ ಸಾಧನಗಳನ್ನು ವಶಕ್ಕೆ ಪಡೆದು ಅವುಗಳಲ್ಲಿರುವುದನ್ನು ಡೌನ್‍ಲೋಡ್ ಮಾಡಿದ್ದಾರೆ.  ಇದು ನನ್ನ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆ" ಎಂದು ಸೆಖ್ರಿ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದಾರೆ.

"ಆಗಮಿಸಿದ ತಂಡ ಸೌಜನ್ಯದಿಂದ ವರ್ತಿಸಿದೆ. ನಮಗೆ ಅಡಗಿಸಿಡಲು ಏನೂ ಇಲ್ಲ, ನಾವು ಯಾವುದೇ ಕಾನೂನು ಉಲ್ಲಂಘಿಸಿಲ್ಲ, ನಮ್ಮ ಉದ್ಯಮವನ್ನು ಪ್ರಾಮಾಣಿಕತೆಯಿಂದ ನಾವು ನಡೆಸುತ್ತಿದ್ದೇವೆ" ಎಂದು ಅವರು ಬರೆದಿದ್ದಾರೆ.

ನ್ಯೂಸ್‍ಕ್ಲಿಕ್ ತಂಡ ಐಟಿ ಅಧಿಕಾರಿಗಳ ಭೇಟಿ ಕುರಿತು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News