ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರು, ಸೆ.11: ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರನ್ನು ಇಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 1980ರಿಂದ ತಾವಿಬ್ಬರು ಆತ್ಮೀಯರಾಗಿದ್ದು, ಅವರ ಆರೋಗ್ಯ ವಿಚಾರಣೆಗಾಗಿಯೇ ತಾವು ಇಂದು ಮಂಗಳೂರಿಗೆ ಭೇಟಿ ನೀಡಿರುವುದಾಗಿ ಹೇಳಿದರು.
ಆಸ್ಕರ್ ಫೆರ್ನಾಂಡಿಸ್‌ರವರ ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರು, ಹಾಗೂ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆ ಮಾತನಾಡಿದ್ದೇನೆ ಎಂದರು.
ಕೊಂಕಣ ರೈಲ್ವೆ ಆರಂಭಕ್ಕಾಗಿ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಂದರ್ಭ ಆಸ್ಕರ್ ಫೆರ್ನಾಂಡಿಸ್‌ರವರು ಹಳ್ಳಿ ಹಳ್ಳಿಗಳಲ್ಲಿ ತಿರುಗಿ ರೈತರನ್ನು ಮನವೊಲಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸಹಕರಿಸಿದ್ದರು. ಆ ಸಂದರ್ಭದಿಂದ ನಾವಿಬ್ಬರೂ ಆತ್ಮೀಯರಾಗಿದ್ದು, ಅನೇಕ ವಿಚಾರಗಳಲ್ಲಿ ನಾವಿಬ್ಬರು ಜತೆಯಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿಚಾರ ವಿನಿಮಯ ನಡೆಸುತ್ತಿದ್ದುದಾಗಿ ಹೇಳಿದರು.
ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್ ಮೊದಲಾದವರು ಖರ್ಗೆ ಆಸ್ಪತ್ರೆ ಭೇಟಿ ವೇಳೆ ಉಪಸ್ಥಿತರಿದ್ದರು.