ಮುಂಬೈ: ಟೆಂಪೋದಲ್ಲಿ ಭೀಕರ ಅತ್ಯಾಚಾರಕ್ಕೊಳಗಾದ ಮಹಿಳೆ ಮೃತ್ಯು; ಆರೋಪಿ ಬಂಧನ

Update: 2021-09-11 16:25 GMT

ಮುಂಬೈ,ಸೆ.11: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದಿಲ್ಲಿಯ ನಿರ್ಭಯಾ ಪ್ರಕರಣ ಮುಂಬೈನಲ್ಲಿ ಮರುಕಳಿಸಿದೆ. ಉಪನಗರ ಸಾಕಿನಾಕಾದಲ್ಲಿ ಕಾಮುಕನಿಂದ ಅತ್ಯಾಚಾರ ಮತ್ತು ಕ್ರೂರ ಹಿಂಸೆಗೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ರಾಜಾವಾಡಿಯ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೌರ್ಯದ ಪರಮಾವಧಿಯಾಗಿ ನತದೃಷ್ಟ ಮಹಿಳೆಯ ಗುಪ್ತಾಂಗದಲ್ಲಿ ಕಬ್ಬಿಣದ ಸರಳು ತೂರಿಸಲಾಗಿದ್ದು,ತೀವ್ರವಾಗಿ ಗಾಯಗೊಂಡಿದ್ದಳು. ತೀವ್ರ ರಕ್ತಸ್ರಾವವಾಗಿದ್ದ ಮಹಿಳೆ ಶುಕ್ರವಾರ ನಸುಕಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಳು. ಅತ್ಯಾಚಾರ ಮತ್ತು ಕ್ರೂರ ಹಿಂಸೆಯ ಬಳಿಕ ಆರೋಪಿ ಮಹಿಳೆಯನ್ನು ಚೂರಿಯಿಂದ ಇರಿದಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. 

ಸಾಕಿನಾಕಾದ ಖೈರಾನಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಮಹಿಳೆಯ ಮೇಲೆ ತೀವ್ರ ಹಲ್ಲೆ ನಡೆಸುತ್ತಿದ್ದಾನೆ ಎಂಬ ದೂರವಾಣಿ ಮಾಹಿತಿ ಶುಕ್ರವಾರ ನಸುಕಿನಲ್ಲಿ ಪೊಲೀಸರಿಗೆ ಲಭಿಸಿತ್ತು. ಅವರು ಸ್ಥಳಕ್ಕೆ ಧಾವಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟೆಂಪೋವೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ಹಿಂಸಿಸಿರುವುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಪ್ರದೇಶದಲ್ಲಿಯ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದ ಪೊಲೀಸರು ಲಭ್ಯ ಸುಳಿವುಗಳನ್ನು ಆಧರಿಸಿ ಮೋಹನ್ ಚೌಹಾಣ (45) ಎಂಬಾತನನ್ನು ಬಂಧಿಸಿದ್ದಾರೆ. ಚೌಹಾಣ ಟೆಂಪೋವನ್ನು ತೊರೆದು ತೆರಳುತ್ತಿರುವ ದೃಶ್ಯ ವೀಡಿಯೊದಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News