ಮಂಗಳೂರು ವಿಮಾನ ನಿಲ್ದಾಣದ ನಾಮಫಲಕದಿಂದ ಅದಾನಿ ಹೆಸರು ತೆರವು: ದಿಲ್ ರಾಜ್ ಆಳ್ವ

Update: 2021-09-11 09:15 GMT

ಮಂಗಳೂರು, ಸೆ.11: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು 'ಅದಾನಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಬದಲಿಸಿದ್ದ ನಿರ್ವಹಣೆ ಗುತ್ತಿಗೆ ಕಂಪೆನಿ 'ಅದಾನಿ' ಇದೀಗ ಸ್ಥಳೀಯರ ಹೋರಾಟದ ಫಲವಾಗಿ ಅದನ್ನು ಹಿಂದಿನಂತೆ ಬದಲಿಸಿದೆ ಎಂದು ಸಾಮಾಜಿಕ ಹೋರಾಟಗಾರ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ ಬಳಿಕ ಅಲ್ಲಿನ ನಾಮಫಲಕವನ್ನು ಕಂಪೆನಿಯು ಬದಲಾಯಿಸಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣ ಮತ್ತು ಅದಾನಿ ಕಂಪೆನಿ ನಡುವೆ ನಡೆದ ಒಡಂಬಡಿಕೆಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಇರಲಿಲ್ಲ ಎನ್ನುವುದು ಮಾಹಿತಿ ಹಕ್ಕಿನಿಂದ ತಿಳಿದುಬಂದಿತ್ತು. ಇದರ ಆಧಾರದಲ್ಲಿ ನಡೆಸಿದ ಕಾನೂನು ಹೋರಾಟದ ಫಲವಾಗಿ ಶುಕ್ರವಾರ ಕಂಪೆನಿಯು ವಿಮಾಣ ನಿಲ್ದಾಣದ ನಾಮಫಲಕದಿಂದ ಅದಾನಿ ಹೆಸರು ಕೈ ಬಿಟ್ಟು ಮೊದಲಿನಂತೆ 'ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರು ನಾಮಫಲಕ ಅಳವಡಿಸಿದೆ. ಇದು ನಮ್ಮ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News