ಗಂಗೊಳ್ಳಿ: ಚುಂಗಿಗುಡ್ಡೆ ಬಳಿ ಹೊಳೆಗೆ ಬಿದ್ದು ತಾಯಿ, ಮಗ ಮೃತ್ಯು

Update: 2021-09-11 15:23 GMT
ರೋಝಿ ರಿಯಾ - ಶಾನ್

ಕುಂದಾಪುರ, ಸೆ.11: ವಾಕಿಂಗ್ ತೆರಳಿದ್ದ ತಾಯಿ ಮಗ ಸೌಪರ್ಣಿಕ ಹೊಳೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ನಾಡ ಗ್ರಾಮದ ಚುಂಗಿಗುಡ್ಡೆ ಎಂಬಲ್ಲಿ ನಡೆದಿದೆ.

ಮೃತರನ್ನು ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಎಂಬವರ ಪತ್ನಿ ರೋಝಿ ರಿಯಾ (34) ಹಾಗೂ ಮಗ ಶಾನ್(11) ಎಂದು ಗುರುತಿಸಲಾಗಿದೆ. ಇವರು ಪ್ರತಿದಿನದಂತೆ ಇಂದು ಕೂಡ ಮನೆ ಸಮೀಪದ ಹೊಳೆ ಬದಿ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಇವರ ಮಗ ಅಕಸ್ಮಿಕವಾಗಿ ಹೊಳೆಗೆ ಬಿದ್ದರು. ಇದನ್ನು ಕಂಡ ತಾಯಿ ಮಗನನ್ನು ರಕ್ಷಣೆ ಮಾಡಲು ತಾನು ಕೂಡ ಹೊಳೆಗೆ ಹಾರಿದರು. ಇದರಿಂದ ಇಬ್ಬರು ಕೂಡ ನದಿಪಾಲಾಗಿ ನಾಪತ್ತೆಯಾದರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಮೊದಲು ಮಗನ ಮೃತದೇಹ ಅಲ್ಲೇ ಸಮೀಪ ಪತ್ತೆಯಾದರೆ, ನಂತರ ತಾಯಿ ಮೃತದೇಹವು ಮರವಂತೆ ಮಾರಸ್ವಾಮಿ ದೇವಸ್ಥಾನದ ಸೇತುವೆ ಸಮೀಪ ಪತ್ತೆಯಾಯಿತು ಎಂದು ತಿಳಿದು ಬಂದಿದೆ.

ರೋಝಿ ರಿಯಾ ಕಳೆದ ಹಲವು ವರ್ಷಗಳ ಕಾಲ ಕುವೈತ್ ನಲ್ಲಿ ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಕೆಲಸ ತೊರೆದು ಗಲ್ಫ್ ದೇಶದ ಬೇರೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಇವರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಕೆಲವು ದಿನಗಳ ನಂತರ ಇವರು ವಿದೇಶಕ್ಕೆ ತೆರಳುವವರಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾ ಎಸ್ಸೈ ನಂಜ ನಾಯ್ಕಿ ಹಾಜರಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News