ತ್ರಿಪುರಾದ ಸಿಪಿಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ
ಮಂಗಳೂರು, ಸೆ.11: ತ್ರಿಪುರ ರಾಜ್ಯದೆಲ್ಲೆಡೆ ಸಿಪಿಎಂ ಕಚೇರಿಗಳ ಮೇಲೆ ನಡೆದ ಸರಣಿ ದಾಳಿಯನ್ನು ಖಂಡಿಸಿ ಸಿಪಿಎಂ ವತಿಯಿಂದ ಶನಿವಾರ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ, ತ್ರಿಪುರ ರಾಜ್ಯದಲ್ಲಿ 40 ವರ್ಷಗಳ ಕಾಲ ಸುದೀರ್ಘವಾಗಿ ಆಳ್ವಿಕೆ ನಡೆಸಿದ ಕಮ್ಯುನಿಸ್ಟರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದರು. ಅಲ್ಲದೆ ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟ ಅಲ್ಲಿನ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಪ್ರಬಲವಾಗಿ ಸೆಣಸಾಟ ನಡೆಸಿ ರಾಜ್ಯದಲ್ಲಿ ಐಕ್ಯ ಸಾಧಿಸಿ ತ್ರಿಪುರವನ್ನು ಭಾರತದ ಅವಿಬಾಜ್ಯ ಅಂಗವಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣಬಲ, ತೋಳ್ಬಲವನ್ನು ಬಳಸಿ ಆಧಿಕಾರಕ್ಕೇರಿದ ಬಿಜೆಪಿ ಇದೀಗ ಸಿಪಿಎಂ ಕಚೇರಿಗಳ ಮೇಲೆ ಸರಣಿ ದಾಳಿ ನಡೆಸಿ ಹತಾಶ ಪ್ರವೃತ್ತಿಯನ್ನು ಪ್ರದರ್ಶಿಸಿದೆ ಎಂದು ಟೀಕಿಸಿದರು.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ.ಯಾದವ ಶೆಟ್ಟಿ ಮಾತನಾಡಿದರು.
ಸಿಪಿಎಂ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ, ಬಶೀರ್ ಪಂಜಿಮೊಗರು, ಬಾಬು ದೇವಾಡಿಗ, ಅಶೋಕ್ ಶ್ರೀಯಾನ್, ದಿನೇಶ್ ಶೆಟ್ಟಿ, ಶಶಿಧರ್ ಶಕ್ತಿಗರ, ಶ್ರೀನಾಥ ಕಾಟಿಪಳ್ಳ, ಭಾರತಿ ಬೋಳಾರ, ನಳಿನಾಕ್ಷಿ, ವಿಲಾಸಿನಿ, ಪ್ರಮೀಳಾ ಶಕ್ತಿನಗರ, ತಿಮ್ಮಯ್ಯ ಕೊಂಚಾಡಿ, ಡಾ.ಕೃಷ್ಣಪ್ಪ ಕೊಂಚಾಡಿ ಪಾಲ್ಗೊಂಡಿದ್ದರು.