×
Ad

ಕರ್ನಾಲ್ ಲಾಠಿ ಪ್ರಹಾರದ ಕುರಿತು ತನಿಖೆಗೆ ಸರಕಾರದ ಆದೇಶ, ಪ್ರತಿಭಟನೆ ಹಿಂದೆಗೆದುಕೊಂಡ ರೈತರು

Update: 2021-09-11 20:27 IST
photo: twitter.com/no1_times

ಚಂಡಿಗಡ,ಸೆ.11: ಕಳೆದ ತಿಂಗಳು 28ರಂದು ಹರ್ಯಾಣದ ಕರ್ನಾಲ್ ನಲ್ಲಿ ರೈತರ ಮೇಲೆ ನಡೆದಿದ್ದ ಪೊಲೀಸ್ ಲಾಠಿಪ್ರಹಾರದ ಕುರಿತು ತನಿಖೆಯನ್ನು ನಡೆಸುವುದಾಗಿ ರಾಜ್ಯ ಸರಕಾರವು ನೀಡಿರುವ ಭರವಸೆಯ ಮೇರೆಗೆ ಕಳೆದೊಂದು ವಾರದಿಂದ ಅಲ್ಲಿಯ ಮಿನಿ ಸಚಿವಾಲಯದ ಎದುರು ನಡೆಯುತ್ತಿದ್ದ ಪ್ರತಿಭಟನೆಯು ಶನಿವಾರ ಅಂತ್ಯಗೊಂಡಿದೆ.

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ನಡೆಸಿದ್ದ ಲಾಠಿ ಪ್ರಹಾರದಲ್ಲಿ 10 ಮಂದಿ ರೈತರು ಗಾಯಗೊಂಡಿದ್ದು,ತೀವ್ರವಾಗಿ ಗಾಯಗೊಂಡಿದ್ದ ಓರ್ವ ರೈತ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆದರೆ ಆತನ ಸಾವಿಗೆ ಹೃದಯಾಘಾತ ಕಾರಣವಾಗಿತ್ತು ಎಂದು ಸರಕಾರವು ಪ್ರತಿಪಾದಿಸಿತ್ತು.
 
ರೈತರು ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿದರೆ ‘ಅವರ ತಲೆಗಳನ್ನು ಒಡೆಯಿರಿ’ ಎಂದು ಆಗಿನ ಕರ್ನಾಲ್ ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ಅವರು ಪೊಲೀಸರಿಗೆ ಆದೇಶಿಸಿದ್ದರು.

ಲಾಠಿ ಪ್ರಹಾರದ ಕುರಿತು ಮತ್ತು ಘಟನೆಯಲ್ಲಿ ಸಿನ್ಹಾ ಪಾತ್ರದ ಕುರಿತು ಮಾಜಿ ನ್ಯಾಯಾಧೀಶರಿಂದ ಒಂದು ತಿಂಗಳ ಅವಧಿಯ ತನಿಖೆಗೆ ರೈತ ಸಂಘಟನೆಗಳು ಮತ್ತು ರಾಜ್ಯ ಸರಕಾರ ಶನಿವಾರ ಒಪ್ಪಿಕೊಂಡಿವೆ. ತನಿಖೆ ಪೂರ್ಣಗೊಳ್ಳುವವರೆಗೆ ಸಿನ್ಹಾ ಅವರನ್ನು ರಜೆಯಲ್ಲಿ ತೆರಳುವಂತೆ ಸರಕಾರವು ಆದೇಶಿಸಿದೆ.

ಸೆ.1ರಂದು ಜಿಲ್ಲಾಡಳಿತವು ನಡೆಸಿದ್ದ ವರ್ಗಾವಣೆಗಳಲ್ಲಿ ಸಿನ್ಹಾರನ್ನು ಕರ್ನಾಲ್ನಿಂದ ಹೊರಕ್ಕೆ ವರ್ಗಾಯಿಸಲಾಗಿತ್ತು.
 
‘ಲಾಠಿ ಪ್ರಹಾರದಲ್ಲಿ ಸಿನ್ಹಾ ಪಾತ್ರದ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ತನಿಖೆಯ ನಮ್ಮ ಬೇಡಿಕೆಯನ್ನು ಸರಕಾರವು ಒಪ್ಪಿಕೊಂಡಿದೆ. ತನಿಖೆಯು ಸಿನ್ಹಾ ವಿರುದ್ಧ ದೋಷಾರೋಪಣೆ ಮಾಡಿದರೆ ಅದು ಮಹತ್ವದ ಪರಿಣಾಮವನ್ನು ಬೀರಲಿದೆ ’ಎಂದು ಬಿಕೆಯು ನಾಯಕ ಗುರ್ನಾಮ್ ಸಿಂಗ್ ಚಾಧುನಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೃತ ರೈತ ಸುಶೀಲ್ ಕಾಜಲ್ ಅವರ ಕುಟುಂಬದ ಇಬ್ಬರು ಸದಸ್ಯರಿಗೆ ಉದ್ಯೋಗಗಳನ್ನು ನೀಡುವುದಾಗಿ ರಾಜ್ಯ ಸರಕಾರವು ಪ್ರಕಟಿಸಿದೆ. ಕಾಜಲ್ ಸಾವಿಗೂ ಲಾಠಿ ಪ್ರಹಾರಕ್ಕೂ ತಳುಕು ಹಾಕಿದ್ದ ವರದಿಗಳು ತಪ್ಪು ಎಂದು ಸರಕಾರವು ಈ ಹಿಂದೆ ಹೇಳಿತ್ತು.

ಲಾಠಿ ಪ್ರಹಾರದ ವಿರುದ್ಧ ರೈತರು ಸೆ.5ರಿಂದ ಕರ್ನಾಲ್ ಮಿನಿ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಕಳೆದೊಂದು ವಾರದಲ್ಲಿ ರೈತರು ಮತ್ತು ಸರಕಾರದ ನಡುವೆ ನಡೆದಿದ್ದ ಮೂರು ಸುತ್ತಿನ ಮಾತುಕತೆಗಳು ವಿಫಲಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News