ಉತ್ತರ ಪ್ರದೇಶ : ಮಥುರಾದ 22 ವಾರ್ಡ್ ಗಳಲ್ಲಿ ಮದ್ಯ, ಮಾಂಸ ಮಾರಾಟಕ್ಕೆ ನಿಷೇಧ

Update: 2021-09-11 15:09 GMT

 ಲಕ್ನೋ,ಸೆ.11: ಉತ್ತರ ಪ್ರದೇಶ ಸರಕಾರವು ಮಥುರಾ-ವೃಂದಾವನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸುಮಾರು 10 ಕಿ.ಮೀ. ವಿಸ್ತೀರ್ಣದ ಪ್ರದೇಶದಲ್ಲಿರುವ 22 ವಾರ್ಡ್ ಗಳನ್ನು ಪವಿತ್ರ ಯಾತ್ರಾ ಸ್ಥಳಗಳೆಂದು ಘೋಷಿಸಿ ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಈ ವಾರ್ಡ್ ಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು. ಈ ಹಿಂದೆ ಇತರ ಒಂಭತ್ತು ವಾರ್ಡ್ ಗಳನ್ನು ಪವಿತ್ರ ಯಾತ್ರಾ ಸ್ಥಳಗಳೆಂದು ಸರಕಾರವು ಘೋಷಿಸಿತ್ತು.

ನಗರದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ ಅವರು ಆ.30ರಂದು ಸರಕಾರಿ ಅಧಿಕಾರಿಗಳಿಗೆ ಆದೇಶಿಸಿದ್ದರು. ನಗರದ ವೈಭವವನ್ನು ಪುನರುಜ್ಜೀವನಗೊಳಿಸಲು ಮದ್ಯ ಮತ್ತು ಮಾಂಸದ ಮಾರಾಟದ ಬದಲು ಹಾಲನ್ನು ಮಾರುವಂತೆ ಆದಿತ್ಯನಾಥ ವ್ಯಾಪಾರಿಗಳಿಗೆ ಸೂಚಿಸಿದ್ದರು. ಶ್ರೀಕೃಷ್ಣನ ಜನ್ಮಸ್ಥಾನವಾಗಿರುವ ಮಥುರಾವನ್ನು ಪವಿತ್ರ ಕ್ಷೇತ್ರವೆಂದು ಹಿಂದುಗಳು ಪರಿಗಣಿಸಿದ್ದಾರೆ. ಅಬಕಾರಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು 22 ವಾರ್ಡ್ ಗಳ ಪುನರ್ಪರಿಶೀಲನೆ ನಡೆಸಲಿದ್ದಾರೆ ಮತ್ತು ಮದ್ಯ ಹಾಗೂ ಮಾಂಸಾಹಾರ ಮಾರಾಟಗಾರರ ಪರವಾನಿಗೆಗಳನ್ನು ರದ್ದುಗೊಳಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಧಾರ್ಮಿಕ ವ್ಯವಹಾರಗಳು) ಅವನೀಶ ಕುಮಾರ್ ಅವಸ್ಥಿಯವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಮಥುರಾ-ವೃಂದಾವನ ಪ್ರದೇಶವನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ದೇಶವಿದೇಶಗಳ ಲಕ್ಷಾಂತರ ಯಾತ್ರಿಕರು ಅಲ್ಲಿಗೆ ಭೇಟಿ ನೀಡುತ್ತಾರೆ. ಪ್ರದೇಶವು ಐತಿಹಾಸಿಕ ಮಹತ್ವವನ್ನು ಹೊಂದಿದ್ದು ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವವನ್ನು ಪಡೆದಿದೆ ಎಂದು ಸರಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News