ಸಮುದ್ರ ವಿವಾದ ವರ್ಧಿಸುವ ಕ್ರಮಗಳಿಂದ ದೂರವಿರಿ: ವಿಯೆಟ್ನಾಮ್ ಗೆ ಚೀನಾ ಸಲಹೆ
ಹನೋಯ್ , ಸೆ.11: ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುವ ಮತ್ತು ವಿವಾದವನ್ನು ವರ್ಧಿಸಬಹುದಾದ ಏಕಪಕ್ಷೀಯ ಕ್ರಮಗಳಿಂದ ಉಭಯ ದೇಶಗಳ ಅಧಿಕಾರಿಗಳು ದೂರವಿರಬೇಕಾಗಿದೆ ಎಂದು ಚೀನಾದ ವಿದೇಶ ವ್ಯವಹಾರ ಸಚಿವ ವಾಂಗ್ ಯಿ ವಿಯೆಟ್ನಾಮ್ಗೆ ತಿಳಿಸಿದ್ದಾರೆ.
ವಿಯೆಟ್ನಾಮ್ಗೆ ಭೇಟಿ ನೀಡಿ ಅಲ್ಲಿನ ಉಪಪ್ರಧಾನಿ ಫಾಮ್ಬಿನ್ ಮಿನ್ರೊಂದಿಗೆ ಸಭೆ ನಡೆಸಿದ ಸಂದರ್ಭ ವಾಂಗ್ ಯಿ ಚೀನಾದ ನಿಲುವನ್ನು ಸ್ಪಷ್ಟಪಡಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಏಶ್ಯಾಪೆಸಿಫಿಕ್ ವಲಯದ 4 ದೇಶಗಳಿಗೆ ಕೈಗೊಂಡಿರುವ ಪ್ರವಾಸದ ಅಂಗವಾಗಿ ವಾಂಗ್ ಯಿ ವಿಯೆಟ್ನಾಮ್ಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಗ್ನೇಯ ಏಶ್ಯಾ ದೇಶಗಳಿಗೆ ನೀಡಿರುವ ಭೇಟಿಗೆ ಪ್ರತ್ಯುತ್ತರವಾಗಿ ಚೀನಾದ ಸಚಿವರು ಪ್ರವಾಸ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ದಕ್ಷಿಣ ಚೀನಾ ಪ್ರದೇಶದಲ್ಲಿ ಅತ್ಯಂತ ಕಷ್ಟಪಟ್ಟು ಗಳಿಸಿದ ಶಾಂತಿ ಮತ್ತು ಸ್ಥಿರತೆಯ ಪರಿಸ್ಥಿತಿಯನ್ನು ಪೋಷಿಸಿಕೊಂಡು ಹೋಗಲು ಮತ್ತು ಪ್ರದೇಶಕ್ಕೆ ಹೊರತಾದ ಶಕ್ತಿಗಳು ಈ ಪ್ರದೇಶದಲ್ಲಿ ಹಸ್ತಕ್ಷೇಪ ನಡೆಸುವುದನ್ನು ತಡೆಯಲು ಉಭಯ ದೇಶಗಳೂ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ವಾಂಗ್ ಯಿ ಹೇಳಿದರು. ವಿಯೆಟ್ನಾಮ್ ವಿದೇಶ ವ್ಯವಹಾರ ಸಚಿವರನ್ನು ವಾಂಗ್ ಯಿ ಭೇಟಿಯಾಗುವ ಕಾರ್ಯಕ್ರಮವಿದೆ ಮತ್ತು ದ್ವಿಪಕ್ಷೀಯ ಸಹಕಾರ ಸಂಬಂಧಕ್ಕಾಗಿನ ಚೀನಾ-ವಿಯೆಟ್ನಾಮ್ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಚೀನಾ-ವಿಯೆಟ್ನಾಮ್ ನಡುವೆ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧ ಸದೃಢವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಗೆ ಸಂಬಂಧಿಸಿ ಉಭಯ ದೇಶಗಳ ಮಧ್ಯೆ ವಿವಾದ ಹುಟ್ಟಿಕೊಂಡಿದೆ.