ದರೋಡೆಗೆ ಯತ್ನಿಸಿದ ದುಷ್ಕರ್ಮಿಗೆ ಪ್ರತಿರೋಧ ಒಡ್ಡಿ ಬೆನ್ನಟ್ಟಿದ ಮಹಿಳೆ: ಮಂಗಳೂರಿನಲ್ಲಿ ಹಾಡಹಗಲೇ ನಡೆದ ಘಟನೆ
ಮಂಗಳೂರು: ಕಾರೊಂದರಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಬ್ಯಾಗ್ ಕಿತ್ತುಕೊಳ್ಳಲು ಯತ್ನಿಸಿದ ಘಟನೆ ನಗರದಲ್ಲಿ ರವಿವಾರ ನಡೆದಿದೆ.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ರಿಟ್ಝ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸೈಂಟ್ ಆಗ್ನೆಸ್ ಕಾಲೇಜು ಗೇಟಿನ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಪ್ರತಿರೋಧ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅವರು ಅಲ್ಲಿಂದ ತಪ್ಪಿಸಿಕೊಂಡು ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆಯ ವೀಡಿಯೊ ವೈರಲ್ ಆಗಿದೆ. ಮಹಿಳೆ ಇಲ್ಲಿವರೆಗೆ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ಯಾಗ್‌ನ್ನು ಕಸಿದುಕೊಳ್ಳಲು ಯತ್ನಿಸಿದ್ದ ಘಟನೆ ನಂತರ ತಿರುವು ಪಡೆದಿದೆ. ಇದು ಯಾವುದೇ ದರೋಡೆ ಪ್ರಕರಣವಲ್ಲ; ಬದಲಾಗಿ ಇದು ಪೊಲೀಸರೇ ನಡೆಸಿದ ಅಣಕು ಕಾರ್ಯಾಚರಣೆಯಾಗಿದೆ.
ಮಂಗಳೂರು ಪೊಲೀಸ್ ಹಾಗೂ ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ರವಿವಾರ ಬೆಳಗ್ಗೆ 11 ಗಂಟೆಗೆ ನಗರದ ಸಂತ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡ ಪಾದಚಾರಿ ಮಹಿಳೆಯ ಬ್ಯಾಗ್‌ನ್ನು ಕಸಿಯಲು ಯತ್ನಿಸಿದಾಗ ಮಹಿಳೆ ಆತನ ಮೇಲೆ ತಿರುಗಿ ಹಲ್ಲೆ ಮಾಡಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕುರಿತ ಅಣಕು ಕಾರ್ಯಾಚರಣೆ ನಡೆಯಿತು.
ಘಟನೆಯ ಬಗ್ಗೆ ಮಾಹಿತಿ ಪಡೆದ ಕಂಟ್ರೋಲ್ ರೂಮ್‌ನವರು ನಗರದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಅಲರ್ಟ್ ಮಾಡಿದ್ದಲ್ಲದೆ, ಸಂಶಯಾಸ್ಪದ ವಾಹನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾದರು. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ಹಾಗೂ ಆಗ್ನೇಸ್ ಕಾಲೇಜು ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಹಾಗೂ ಪುರುಷ ಪಾದಚಾರಿಗಳು ಈ ಅಣಕು ದುಷ್ಕರ್ಮಿಗಳ ಹಾಗೂ ಅವರಿದ್ದ ವಾಹನವನ್ನು ತಡೆಯುವ ಮತ್ತು ಗುರುತು ಪತ್ತೆ ಹಚ್ಚುವಲ್ಲಿ ಹಾಗೂ ಕಾರನ್ನು ಹಿಂಬಾಲಿಸುವ ಪ್ರಯತ್ನ ಮಾಡಿರುವುದು ಅಭಿನಂದನಾರ್ಹ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಅಣಕು ಕಾರ್ಯಾಚರಣೆಯ ಕಾರನ್ನು ಸಾರ್ವಜನಿಕರು ಎರಡು ಮೋಟರ್ ಸೈಕಲ್ ಹಾಗೂ ಕಾರಿನಲ್ಲಿ ಹಿಂಬಾಲಿಸಿದ್ದಾರೆ. ದುಷ್ಕರ್ಮಿಗಳ ಚಹರೆ ಹಾಗೂ ವಾಹನದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದರು. ಮುಂದೆ ಸಿಗ್ನಲ್ ಸಮೀಪ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ದುಷ್ಕರ್ಮಿಗಳ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದು ಕೂಡ ಅಭಿನಂದನಾರ್ಹ ಎಂದರು.
ನಗರದಲ್ಲಿ ಅಣಕು ಕಾರ್ಯಾಚರಣೆಯಲ್ಲಿ ದುಷ್ಕರ್ಮಿಗಳು ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿದಾಗ, ಮಹಿಳೆಯು ದುಷ್ಕರ್ಮಿಗಳ ಮೇಲೆ ಮರುಹಲ್ಲೆ ನಡೆಸಿ ತನ್ನನ್ನು ಸ್ವರಕ್ಷಣೆ ಮಾಡಿಕೊಳ್ಳುವ ಕಾರ್ಯ ಸಿದ್ಧತೆ, ಇಆರ್‌ಎಸ್‌ಎಸ್-112 ಮತ್ತು ಪೊಲೀಸರ ತುರ್ತು ಪ್ರತಿಕ್ರಿಯೆ ಹಾಗೂ ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಎನ್ನುವ ಕುರಿತು ಪುನರಾವಲೋಕನ ಯಶಸ್ವಿಯಾಗಿರುವುದು ಸಿಸಿಟಿವಿ ಫೂಟೇಜ್‌ಗಳಿಂದ ದೃಢಪಟ್ಟಿದೆ. ಮಂಗಳೂರಿನ ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್‌ನ ಮಾಲಕರಾದ ಶೋಭಲತಾ ಕಟೀಲ್ ಅವರ ಸಹಯೋಗದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಭೀತಿ ಸೃಷ್ಟಿಸಿದ್ದ ಅಣಕು ಕಾರ್ಯಾಚರಣೆ: ಮಂಗಳೂರು ಪೊಲೀಸ್ ಹಾಗೂ ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ನಡೆದ ಅಣಕು ಕಾರ್ಯಾಚರಣೆ ಯಶಸ್ವಿಯೆನೋ ಆಯಿತು. ಆದರೆ ಇದಕ್ಕೂ ಮೊದಲು ಘಟನೆಯ ಸಿಸಿಟಿವಿ ಪೂಟೇಜ್‌ನ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿಗಳು ಸಹಿತ ಹಲವು ಸುದ್ದಿಯ ವೆಬ್‌ಸೈಟ್‌ಗಳು ‘ಮಹಿಳೆಯ ಬ್ಯಾಗ್ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು’ ಎನ್ನುವ ಸುದ್ದಿಗಳು ಬಹುತೇಕ ಜನರನ್ನು ತಲುಪಿದ್ದವು. ಈ ಅಣಕು ಕಾರ್ಯಾಚರಣೆ ಹಿರಿಯ ಅಧಿಕಾರಿಗಳ ಮಟ್ಟದಲ್ಲೂ ಗೊತ್ತಿರಲಿಲ್ಲ! ಅಷ್ಟೊಂದು ರಹಸ್ಯವಾಗಿ ಅಣಕು ಕಾರ್ಯಾಚರಣೆ ನಡೆಸಲಾಯಿತು.