ಪರಮಾಣು ಸ್ಥಾವರದ ವಿಶ್ವಸಂಸ್ಥೆ ಕಣ್ಗಾವಲು ಕ್ಯಾಮೆರಾದಲ್ಲಿ ಮೆಮೊರಿ ಕಾರ್ಡ್ ಅಳಡಿಕೆಗೆ ಇರಾನ್ ಸಮ್ಮತಿ‌

Update: 2021-09-12 16:52 GMT

ಟೆಹ್ರಾನ್, ಸೆ.12: ಅಂತರಾಷ್ಟೀಯ ಪರಿವೀಕ್ಷಕರು ತನ್ನ ಗುಪ್ತ ಪರಮಾಣು ಸ್ಥಾವರದ ವಿಶ್ವಸಂಸ್ಥೆಯ ಕಣ್ಗಾವಲು ಕ್ಯಾಮೆರಾದಲ್ಲಿ ಹೊಸ ಮೆಮೊರಿ ಕಾರ್ಡ್ಗಳನ್ನು ಸ್ಥಾಪಿಸಲು ಮತ್ತು ಈ ಮೂಲಕ ಅಲ್ಲಿನ ಚಟುವಟಿಕೆಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಾಗಿ ಇರಾನ್ ರವಿವಾರ ಒಪ್ಪಿಕೊಂಡಿದೆ.

 ಟೆಹ್ರಾನ್ ನಲ್ಲಿ ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ (ಐಎಇಎ) ಮಹಾನಿರ್ದೇಶಕ ರಫೇಲ್ ಗ್ರಾಸಿ ಜತೆ ಸಭೆ ನಡೆಸಿದ ಬಳಿಕ ಇರಾನ್ನ ಪರಮಾಣು ಇಂಧನ ಸಂಸ್ಥೆಯ ಅಧಿಕಾರಿ ಮುಹಮ್ಮದ್ ಇಸ್ಲಾಮಿ ಈ ಘೋಷಣೆ ಮಾಡಿದ್ದಾರೆ. ಇರಾನ್ ಅಂತರ್ ರಾಷ್ಟ್ರೀಯ ಪರಿಶೀಲನೆಗೆ ಸಹಕಾರ ನೀಡಲು ನಿರಾಕರಿಸಿರುವುದರಿಂದ ಅದರ ಮೇಲೆ ಕಠಿಣ ನಿರ್ಬಂಧ ವಿಧಿಸಬೇಕೆಂಬ ಪಶ್ಚಿಮದ ಶಕ್ತ ದೇಶಗಳು ಆಗ್ರಹಿಸಿದ್ದವು. ಈ ವಾರದಲ್ಲಿ ನಡೆಯಲಿರುವ ಐಎಇಎ ಆಡಳಿತ ಮಂಡಳಿ ಸಭೆಗೂ ಮುನ್ನ ಇರಾನ್ ಈ ಗಮನಾರ್ಹ ಕ್ರಮ ಕೈಗೊಂಡಿದೆ.

ಇರಾನ್ ನ ಈ ಕುತಂತ್ರದ ಬಲೆಯೊಳಗೆ ಸಿಲುಕಬೇಡಿ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ವಿಶ್ವದ ಬಲಿಷ್ಟ ದೇಶಗಳನ್ನು ಆಗ್ರಹಿಸಿದ್ದಾರೆ. ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕಲು ಹೆಚ್ಚಿನ ಸಮಯಾವಕಾಶ ದಕ್ಕಿಸಿಕೊಳ್ಳಲು ಇರಾನ್ ಈ ತಂತ್ರ ಹೂಡಿದೆ. ಇರಾನ್ನ ಪರಮಾಣು ಸ್ಥಾವರಗಳ ಪರಿಶೀಲನೆಯನ್ನು ಬಿಡಬಾರದು ಮತ್ತು ಇರಾನ್ಗೆ ಒಂದು ಸಮಯದ ಮಿತಿ ಸೂಚಿಸಬೇಕು. ಸಾಧ್ಯವಾದಷ್ಟು ವಿಳಂಬಿಸುವುದು ಇರಾನ್ನ ತಂತ್ರವಾಗಿದೆ. ಆದ್ದರಿಂದ ಸಮಯದ ಮಿತಿ ನಿಗದಿಗೊಳಿಸಬೇಕು ಎಂದವರು ಆಗ್ರಹಿಸಿದ್ದಾರೆ.

 ಇರಾನ್ ನ ಪರಮಾಣು ಕಾರ್ಯಕ್ರಮದ ಬಗ್ಗೆ ಸೌದಿ ಅರೇಬಿಯಾ ಮತ್ತು ಆಸ್ಟ್ರಿಯಾದ ರಾಜತಾಂತ್ರಿಕರ ಜಂಟಿ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ವಿಶ್ವದ ಪರಮಾಣು ಶಕ್ತ ರಾಷ್ಟ್ರಗಳೊಂದಿಗಿನ ಪರಮಾಣು ಒಪ್ಪಂದ ಮುರಿದುಬಿದ್ದ ಬಳಿಕ, ಫೆಬ್ರವರಿ ಅಂತ್ಯದಿಂದ ತನ್ನ ಅಣುಸ್ಥಾವರದ ಕಣ್ಗಾವಲು ಕ್ಯಾಮೆರಾ ಪರಿಶೀಲಿಸಲು ಇರಾನ್ ಅವಕಾಶ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News