×
Ad

ಕೋವಿಡ್ ಲಸಿಕೆ ಮೊದಲ ಡೋಸ್: ದೇಶದಲ್ಲಿ ಶೇ.100 ಸಾಧನೆ ಎಲ್ಲೆಲ್ಲಿ ಗೊತ್ತೇ?

Update: 2021-09-13 09:22 IST

ಹೊಸದಿಲ್ಲಿ, ಸೆ.13: ದೇಶದಲ್ಲಿ ಕೋವಿಡ್-19 ಸೋಂಕು ವಿರುದ್ಧದ ಲಸಿಕೆ ಅಭಿಯಾನ ಶರವೇಗದಿಂದ ಮುನ್ನಡೆದಿದ್ದು, ಇದುವರೆಗೆ ದೇಶದಲ್ಲಿ 74 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

56.5 ಕೋಟಿ ಫಲಾನುಭವಿಗಳಿಗೆ ಒಂದು ಡೋಸ್ ಪೂರ್ಣಗೊಂಡಿದ್ದರೆ, 17.7 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಮೂರು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.

ಹಿಮಾಚಲ ಪ್ರದೇಶ ಈ ಸಾಧನೆ ಮಾಡಿದ ಮೊದಲ ರಾಜ್ಯವಾಗಿದ್ದು, 55.7 ಲಕ್ಷ ಮಂದಿಗೆ ಕನಿಷ್ಠ ಒಂದು ಡೋಸ್ ಪೂರ್ಣಗೊಳಿಸಿದ್ದು, ನವೆಂಬರ್ ಕೊನೆಯ ಒಳಗಾಗಿ ಎರಡೂ ಡೋಸ್‌ಗಳನ್ನು ವಿತರಿಸಲಾಗುತ್ತದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಜೈರಾಮ್ ಠಾಕೂರ್ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿ 11.8 ಲಕ್ಷ ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. ಆದರೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿವೆ.

ದಾದ್ರಾ ಮತ್ತು ನಗರ್ ಹವೇಲಿಯಲ್ಲಿ 6.26 ಲಕ್ಷ ಮಂದಿಗೆ ಮೊದಲ ಡೋಸ್ ವಿತರಿಸಲಾಗಿದೆ. ಸಿಕ್ಕಿಂನಲ್ಲಿ 5.10 ಲಕ್ಷ ಡೋಸ್ ನೀಡಿಕೆಯೊಂದಿಗೆ ಶೇಕಡ 100ರ ಸಾಧನೆ ಮಾಡಲಾಗಿದೆ. ಲಡಾಖ್ ಹಾಗೂ ಲಕ್ಷದ್ವೀಪಗಳಲ್ಲಿ ಕೂಡಾ ಶೇಕಡ 100ರಷ್ಟು ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರಮವಾಗಿ 1.97 ಲಕ್ಷ ಹಾಗೂ 53,499 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ವಿವರಿಸಲಾಗಿದೆ.

ದೇಶದಲ್ಲಿ ಆರು ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿದ್ದು, ಈ ಪೈಕಿ ಕೋವ್ಯಾಕ್ಸಿನ್ ಮತ್ತು ಝೈಕೋವ್-ಡಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News