ಬಂಟ್ವಾಳ: ತಲೆಗೆ ಹೊಡೆದು ಯುವಕನ ಕೊಲೆ
ಬಂಟ್ವಾಳ, ಸೆ.13: ಯುವಕನೋರ್ವನನ್ನು ತಲೆಗೆ ಹೊಡೆದು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಕೊಡ್ಯಮಲೆ ಎಂಬಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ.
ಕೊಲೆಯಾದವರನ್ನು ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ರಫೀಕ್ (26) ಎಂದು ಗುರುತಿಸಲಾಗಿದೆ. ರಫೀಕ್ ಅವರ ಸಂಬಂಧಿಕನೆನ್ನಲಾದ ಕಕ್ಯೆಪದವು ನಿವಾಸಿ ಸಿದ್ದೀಕ್ ಕೊಲೆ ಆರೋಪಿ ಎಂದು ಹೇಳಲಾಗುತ್ತಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕೊಲೆ ನಡೆದಿದ್ದು, ರಫೀಕ್ ಮೃತದೇಹ ಬಂಟ್ವಾಳ ತಾಲೂಕಿನ ಕೋಡ್ಯಮಲೆ ಎಂಬಲ್ಲಿ ರಸ್ತೆ ಬದಿ ಪತ್ತೆಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ಈ ಕೊಲೆ ಆಗಿದೆ ಎಂದು ಆರಂಭಿಕ ಮಾಹಿತಿ ಲಭಿಸಿದ್ದು, ಮರದ ತುಂಡಿನಿಂದ ತಲೆಗೆ ಹೊಡೆದು ಸಾಯಿಸಿದಂತೆ ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪಿ ಸಿದ್ದೀಕ್ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ ಸ್ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಎಸ್ಸೈ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.