ಕೆ.ಸಿ.ರೋಡ್ ನಲ್ಲಿ ಡಿವೈಎಫ್ಐ ಯುವಜನ ಸಮಾವೇಶ
ಕೆ.ಸಿ.ರೋಡ್, ಸೆ.13: ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ ಕೆ.ಸಿ.ರೋಡ್ ನಲ್ಲಿ ಡಿವೈಎಫ್ಐ ಯುವಜನ ಸಮಾವೇಶ ನಡೆಯಿತು.
ಸಮಾವೇಶದ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಯುವ ಸಮುದಾಯ ಜಾತ್ಯತೀತರಾದರೆ ಮಾತ್ರ ನಮ್ಮ ದೇಶಕ್ಕೆ ಭವಿಷ್ಯ. ಬಹುಸಂಖ್ಯಾತ ಕೋಮುವಾದ ದೇಶಕ್ಕೆ ಅಪಾಯಕಾರಿಯಾದರೆ, ಅಲ್ಪ ಸಂಖ್ಯಾತ ಸಮುದಾಯ ಕೋಮುವಾದ ಆ ಸಮುದಾಯಕ್ಕೆ ಅಪಾಯಕಾರಿ. ಆದ್ದರಿಂದ ಯುವಜನತೆ ಜನರ ಬದುಕಿನ ಬಗ್ಗೆ ಮಾತನಾಡಬೇಕು, ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ, ಉದ್ಯೋಗದ ಹಕ್ಕಿಗಾಗಿ ಯುವಕರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್, ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ, ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಕೆ.ಸಿ.ರೋಡ್ ಘಟಕ ರಚಿಸಲಾಯಿತು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಧ್ವಜ ನೀಡಿ ಯುವಕರನ್ನು ಸಂಘಟನೆಗೆ ಬರಮಾಡಿಕೊಂಡರು.