ಆಸ್ಕರ್ ಫೆರ್ನಾಂಡಿಸ್ ಪತ್ನಿಗೆ ಸೋನಿಯಾ ಗಾಂಧಿ ಸಾಂತ್ವನ
ಮಂಗಳೂರು, ಸೆ.13: ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನಿಧನರಾದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಆಸ್ಕರ್ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಅವರಿಗೆ ಮೊಬೈಲ್ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಶೋಕತಪ್ತ ಬ್ಲೋಸಂ ಅವರಿಗೆ ಮೊಬೈಲ್ ಕರೆ ಮಾಡಿದ ಸೋನಿಯಾ ಗಾಂಧಿ, "ಆಸ್ಕರ್ ಎಲ್ಲರ ಪ್ರೀತಿಪಾತ್ರರು. ನಿಮ್ಮ ದುಃಖದ ಜತೆ ನಾವಿದ್ದೇವೆ" ಎಂದು ಸಂತೈಸಿದರು.
ಈ ವೇಳೆ ಬ್ಲೋಸಂ ಫೆರ್ನಾಂಡಿಸ್ ಅವರು, "ಎರಡು ದಿನಗಳ ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುವುದು. ಅಲ್ಲಿಗೆ ತಾವು ಹಾಗೂ ರಾಹುಲ್ ಗಾಂಧಿ ಭೇಟಿ ನೀಡಬೇಕು" ಎಂದು ಸೋನಿಯಾ ಗಾಂಧಿ ಅವರನ್ನು ಮನವಿ ಮಾಡಿದ್ದಾರೆ.
ಆಸ್ಕರ್ ಮೃತದೇಹವನ್ನು ಉಡುಪಿ ಹಾಗೂ ಮಂಗಳೂರು ಕಾಂಗ್ರೆಸ್ ಕಚೇರಿಗೆ ಒಯ್ದು ಬಳಿಕ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಅಂತಿಮ ದರ್ಶನಕ್ಕಾಗಿ ಕೊಂಡೊಯ್ಯಲು ಮಗಳು ನಿರ್ಧರಿಸಿರುವುದಾಗಿ ಬ್ಲೋಸಂ ಫೆರ್ನಾಂಡಿಸ್ ಹೇಳಿದಾಗ, '"ನಿಮ್ಮ ನಿರ್ಧಾರವೇ ನಮ್ಮದು. ನಾವೆಲ್ಲಾ ಜತೆಗಿದ್ದೇವೆ" ಎಂದು ಸೋನಿಯಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಅನಾರೋಗ್ಯ ಕಾರಣ ಕಳೆದೊಂದು ತಿಂಗಳಿನಿಂದ ಮಂಗಳೂರಿನ ಯೆನೆಪೊಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್ ಫೆರ್ನಾಂಡಿಸ್ ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಆಸ್ಕರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದರು.