×
Ad

ನಿವೃತ್ತ ಶಿಕ್ಷಕಿಯ ನೆನಪಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ !

Update: 2021-09-13 19:50 IST

ಉಡುಪಿ, ಸೆ.13: ಕೊಡವೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕಿ ಮಲ್ಲಿಕಾ ಟೀಚರ್ ಅವರಿಗೆ ಹಳೆ ವಿದ್ಯಾರ್ಥಿಗಳು, ಊರವರು ಸೇರಿ ಕೊಡವೂರಿನಲ್ಲಿ ರವಿವಾರ ಹಮ್ಮಿಕೊಳ್ಳಲಾದ ಪ್ರತಿಫಲನ ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ಮುಂದೆ ನಿವೃತ್ತರಾಗುವ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹೇಗೆ ಮಾಡಬೇಕು ಎಂಬುದಕ್ಕೆ ಶಾಶ್ವತ ಯೋಜನೆಗಳ ಮೂಲಕ ಮಲ್ಲಿಕಾದೇವಿ ಟೀಚರ್ ಅವರ ಶಿಷ್ಯರು ತೋರಿಸಿಕೊಟ್ಟಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ಹೇಳಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮಲ್ಲಿಕಾ ಟೀಚರ್ ಅವರ ಸೇವೆ ಮುಕ್ತಾಯವಾದರೂ ಅವರ ನೆನಪು ಶಾಶ್ವತವಾಗಿರಬೇಕು ಎಂದು ಉತ್ತಮ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕುಡಿಯುವ ನೀರು ಪೂರೈಕೆಗಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ನಿವೃತ್ತರಿಗೆ ಸನ್ಮಾನ ಅಂದರೆ ಹಾರ, ಹಣ್ಣುಗಳನ್ನು ನೀಡುವುದಕ್ಕೆ ಎಲ್ಲ ಕಡೆ ಸೀಮಿತವಾಗಿರುತ್ತದೆ ಇಲ್ಲಿ ಅದಕ್ಕಿಂತ ಭಿನ್ನವಾಗಿ ಶಾಶ್ವತ ಕೆಲಸಗಳ ಮೂಲಕ ಅಭಿನಂದಿಸಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭಾಷಣೆ ಸ್ಪರ್ಧೆ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಲ್ಲಿಕಾ ದೇವಿ ಶಿಕ್ಷಕಿಗೆ ಅಭಿನಂದನಾ ಗ್ರಂಥ ಅರ್ಪಣೆ ನಡೆಸ ಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಉಡುಪಿ ನಗರಾಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಿವೃತತಿ ಶಿಕ್ಷಕಿ ಮಲ್ಲಿಕಾ ಟೀಚರ್, ಉದ್ಯಮಿಗಳಾದ ಆನಂದ್ ಪಿ. ಸುವರ್ಣ, ಸಾಧು ಸಾಲ್ಯಾನ್, ನಾಗರಾಜ್ ಸುವರ್ಣ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾರಾಯಣ ಬಲ್ಲಾಳ್, ಶ್ರೀಶ ಭಟ್, ವಿಜಯ ಕೊಡವೂರು, ಅರುಣ್ ಕುಮಾರ್, ಮುಹಮ್ಮದ್ ಶರೀಫ್, ಬಾಲಕೃಷ್ಣ ಕೊಡವೂರು, ಸತೀಶ್ ಕೊಡವೂರು, ಪ್ರವೀಣ್ ಜಿ.ಕೊಡವೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News