×
Ad

'ಫಾದರ್ ಆಗಲಿದ್ದಾರೆಂದ ಆಸ್ಕರ್ ರಾಜಕಾರಣಿಯಾದರು, ರಾಜಕಾರಣಿಯಾಗಲಿದ್ದಾರೆಂದ ಮಾರ್ಟಿಸ್ ಫಾದರ್ ಆದರು'

Update: 2021-09-13 20:24 IST

ಉಡುಪಿ, ಸೆ.13: ‘ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ 1960ರ ಸಂದರ್ಭದಲ್ಲಿ ನೇರ ನುಡಿಯಂತಿದ್ದ ನಾನು ರಾಜಕಾರಣಿ ಆಗಲಿದ್ದೇನೆ ಮತ್ತು ಸೌಮ್ಯ ಸ್ವಭಾವದ ಆಸ್ಕರ್ ಫೆರ್ನಾಂಡಿಸ್ ಫಾದರ್ ಆಗಲಿದ್ದಾರೆ ಎಂದು ಎಲ್ಲರು ಹೇಳುತ್ತಿದ್ದರು. ಆದರೆ ಮುಂದೆ ಅದು ಉಲ್ಟಾ ಆಗಿ ನಾನು ಫಾದರ್ ಆದರೆ, ಆಸ್ಕರ್ ಫೆರ್ನಾಂಡಿಸ್ ರಾಜಕಾರಣಿಯಾದರು’ ಎಂದು ಉಡುಪಿಯ ಧರ್ಮ ಗುರು ಫಾ.ವಿಲಿಯಂ ಮಾರ್ಟಿಸ್, ಆಸ್ಕರ್ ಜೊತೆಗಿನ ನೆನಪುಗಳನ್ನು ಬಿಚ್ಚಿಟ್ಟರು.

‘ನಾನು 1957ರಲ್ಲಿ ಎಂಜಿಎಂ ಕಾಲೇಜಿನಲ್ಲಿ ಪಿಯುಸಿಗೆ ಸೇರಿದರೆ, ಮುಂದಿನ ವರ್ಷ 1958ರಲ್ಲಿ ಆಸ್ಕರ್ ಕೂಡ ಅದೇ ಕಾಲೇಜಿಗೆ ಸೇರ್ಪಡೆಗೊಂಡರು. ಹೀಗೆ ನಮ್ಮಿಬ್ಬರ ಪಯಣ ಅಲ್ಲಿಂದ ಆರಂಭವಾಯಿತು. 1959ರಲ್ಲಿ ತುಂಬಾ ಜನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದರು. ಆಗ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ನಾವೆಲ್ಲ ಜಾಲಿ ಕ್ಲಬ್ ಎಂಬ ಸಂಘಟನೆಯನ್ನು ರಚಿಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಟ್ಯೂಶನ್ ಕೊಡುವ ಕೆಲಸ ಮಾಡಿದ್ದೇವು’ ಎಂದು ಫಾ.ವಿಲಿಯಂ ಮಾರ್ಟಿಸ್ ತಿಳಿಸಿದರು.

ಪಿಯುಸಿ ಬಳಿಕ ನಾವಿಬ್ಬರು ಎಲ್‌ಐಸಿಯಲ್ಲಿ ಉದ್ಯೋಗ ಆರಂಭಿಸಿದೆವು. ಆಸ್ಕರ್ ಜೊತೆ ನಾನು ಎರಡು ವರ್ಷ ಕೆಲಸ ಮಾಡಿದ್ದೆ. ಬಳಿಕ ಅವರು ಮಣಿಪಾಲದಲ್ಲಿ ಎಲ್‌ಐಸಿ ತೊರೆದು ಕಂಪೆನಿ ಆರಂಭಿಸಿದರು. ಈ ಮಧ್ಯೆ ನಾವಿಬ್ಬರು ಸಾಕಷ್ಟು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆವು. ಅಜ್ಜರಕಾಡು ವಾರ್ಡಿನಲ್ಲಿ ನೀರು ಇಲ್ಲದ ಸಂದರ್ಭ ಮನೆಮನೆಗೆ ನೀರು ಕೊಡುವ ಕೆಲಸ ಮಾಡಿದ್ದೇವೆ. ಅದೇ ರೀತಿ ಉಡುಪಿಯಲ್ಲಿ ನೆರೆ ಬಂದಾಗಲೂ ಆಸ್ಕರ್ ನೇತೃತ್ವದಲ್ಲಿ ನಾವೆಲ್ಲ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News