ಕಾಶ್ಮೀರದಲ್ಲಿ ಭಾರತದಿಂದ ಮಾನವ ಹಕ್ಕು ಉಲ್ಲಂಘನೆ: ಪಾಕ್ ಆರೋಪ, ದಾಖಲೆ ಬಿಡುಗಡೆ

Update: 2021-09-13 17:40 GMT

ಇಸ್ಲಮಾಬಾದ್, ಸೆ.13: ಇಸ್ಲಮಾಬಾದ್ನಲ್ಲಿ ಸೋಮವಾರ ನಡೆದ ಸುದ್ಧಿಗೋಷ್ಟಿಯಲ್ಲಿ 131 ಪುಟದ ದಾಖಲೆಯನ್ನು ಬಿಡುಗಡೆಗೊಳಿಸಿರುವ ಪಾಕಿಸ್ತಾನ, ಕಾಶ್ಮೀರದಲ್ಲಿ ಭಾರತ ನಡೆಸಿರುವ ಮಾನವಹಕ್ಕು ಉಲ್ಲಂಘನೆಯ ವಿವರಗಳು ಇದರಲ್ಲಿದೆ ಎಂದು ಪ್ರತಿಪಾದಿಸಿದೆ.

ನಮ್ಮ ಪಾತ್ರವನ್ನು ನಿರ್ವಹಿಸಲು ಮತ್ತು ವಿಶ್ವದ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಿಕೊಳ್ಳುವ ಭಾರತದ ನೈಜ ಮುಖವನ್ನು ಅನಾವರಣಗೊಳಿಸಲು ನಿರ್ಧರಿಸಿದ್ದೇವೆ . ಈ ದಾಖಲೆಯನ್ನು ವಿಶ್ವಸಂಸ್ಥೆ ಹಾಗೂ ಅಂತರಾಷ್ಟ್ರೀಯ ಸಮುದಾಯದ ಸದಸ್ಯರ ಜತೆ ಹಂಚಿಕೊಳ್ಳಲಾಗುವುದು ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಹಾಗೂ ಮಾನವ ಹಕ್ಕು ಇಲಾಖೆಯ ಸಚಿವ ಶಿರೀನ್ ಮಝಾರಿ ಉಪಸ್ಥಿತರಿದ್ದರು.

113 ಉಲ್ಲೇಖಗಳನ್ನು ಆಧರಿಸಿ ಈ ದಾಖಲೆ ಸಿದ್ಧಪಡಿಸಲಾಗಿದ್ದು ಇದರಲ್ಲಿ 26 ಅಂತರಾಷ್ಟ್ರೀಯ ಮಾಧ್ಯಮಗಳ ವರದಿ, 41 ಭಾರತದ ಚಿಂತಕರ ವೇದಿಕೆಯ ಉಲ್ಲೇಖವಿದ್ದರೆ ಪಾಕ್ ಮಾಧ್ಯಮದ ಕೇವಲ 14 ವರದಿಗಳಿವೆ . ಕಾಶ್ಮೀರದಲ್ಲಿ ಯುದ್ಧಾಪರಾಧದಲ್ಲಿ ಶಾಮೀಲಾಗಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹೆಸರನ್ನು ದಾಖಲಿಸಿಕೊಂಡು ನಿರ್ಬಂಧ ವಿಧಿಸಬೇಕು. ಕಾಶ್ಮೀರದಲ್ಲಿ ರಾಸಾಯನಿಕ ಅಸ್ತ್ರ ಬಳಸಲಾಗಿದೆ ಎಂದು ದಾಖಲೆಯಲ್ಲಿ ಆರೋಪಿಸಲಾಗಿದ್ದು ಇದು ರಾಸಾಯನಿಕ ಅಸ್ತ್ರ ಸಮಾವೇಶದ ನಿರ್ಣಯಕ್ಕೆ ವಿರುದ್ಧವಾಗಿದ್ದು ಈ ಬಗ್ಗೆ ನಿಷ್ಪಕ್ಷಪಾತ ಅಂತರಾಷ್ಟ್ರೀಯ ತನಿಖೆ ನಡೆಸಬೇಕು ಎಂದು ಖುರೇಶಿ ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆ ಭಾರತದ ಆಂತರಿಕ ವಿಷಯವಾಗಿದ್ದು ತನ್ನ ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳಲು ಭಾರತ ಸಮರ್ಥವಾಗಿದೆ ಎಂದು ಭಾರತ ಈ ಹಿಂದೆಯೇ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News