ಅಮೆರಿಕದಲ್ಲಿ ಖಾಯಂ ನಿವಾಸ ಸೌಲಭ್ಯ ಕಲ್ಪಿಸುವ ಉದ್ದೇಶದ ನೂತನ ಮಸೂದೆ ಮಂಡನೆ

Update: 2021-09-13 17:41 GMT

ವಾಷಿಂಗ್ಟನ್, ಸೆ.13: ಪೂರಕ ಶುಲ್ಕ ಪಾವತಿಸಿದರೆ ಅಮೆರಿಕದ ಕಾಯಂ ನಿವಾಸದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆಯ ಮಸೂದೆಯನ್ನು ಅಮೆರಿಕದ ಸಂಸತ್ತಿನಲ್ಲಿ ಮಂಡಿಸಲಾಗಿದ್ದು ಇದಕ್ಕೆ ಅನುಮೋದನೆ ದೊರೆತರೆ ಕಾನೂನಿನ ರೂಪ ಪಡೆಯಲಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಉದ್ಯೋಗಾಧಾರಿತ ಗ್ರೀನ್ ಕಾರ್ಡ್ಗೆ ಸಂಬಂಧಿಸಿದ ಬಿಕ್ಕಟ್ಟಿನಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರ ಸಹಿತ ಮಿಲಿಯಾಂತರ ಜನರಿಗೆ ಈ ಹೊಸ ಕಾಯ್ದೆಯಿಂದ ಪ್ರಯೋಜನವಾಗಲಿದೆ. ಅಧಿಕೃತ ಖಾಯಂ ನಿವಾಸ ಕಾರ್ಡ್ ಆಗಿರುವ ಗ್ರೀನ್ಕಾರ್ಡ್ ಹೊಂದಿರುವ ವಲಸಿಗರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅವಕಾಶ ಕಲ್ಪಿಸುತ್ತದೆ.

 ಉದ್ಯೋಗ ಆಧರಿತ ವಲಸೆ ಕೋರಿದ ಅರ್ಜಿ(2 ವರ್ಷಕ್ಕಿಂತ ಹಿಂದಿನ ಆದ್ಯತಾ ದಿನಾಂಕವಿರುವ ಅರ್ಜಿ)ದಾರರಿಗೆ 5,000 ಡಾಲರ್ ಪೂರಕ ಶುಲ್ಕ ವಿಧಿಸಿ ಖಾಯಂ ನಿವಾಸದ ಸೌಲಭ್ಯ ಕಲ್ಪಿಸಬಹುದು ಎಂದು ಅಮೆರಿಕದ ಸಂಸತ್ತಿನ ನ್ಯಾಯಾಂಗ ಸಮಿತಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

 ವಲಸಿಗ ಹೂಡಿಕೆದಾರರು(ಇಬಿ-5 ವರ್ಗ) 50,000 ಡಾಲರ್ ಶುಲ್ಕ ಪಾವತಿಸಬೇಕು. ಅಮೆರಿಕದ ಪ್ರಜೆ ಪ್ರಾಯೋಜಿಸಿದ ಮತ್ತು 2 ವರ್ಷಕ್ಕೂ ಹಿಂದಿನ ಆದ್ಯತೆಯ ದಿನಾಂಕ ಹೊಂದಿರುವ, ಕುಟುಂಬ ಆಧರಿತ ವಲಸೆ ಅರ್ಜಿದಾರರು 2,500 ಡಾಲರ್ ಶುಲ್ಕ ಪಾವತಿಸಬೇಕು. ಅರ್ಜಿದಾರರ ಆದ್ಯತಾ ದಿನಾಂಕ 2 ವರ್ಷದ ಒಳಗೆ ಇರದಿದ್ದರೆ 1,500 ಡಾಲರ್ ಶುಲ್ಕ ಪಾವತಿಸಬೇಕು. ಆದರೆ ಅರ್ಜಿದಾರರು ಅಮೆರಿಕದಲ್ಲೇ ಉಪಸ್ಥಿತರಬೇಕು ಎಂದು ಮಸೂದೆಯಲ್ಲಿ ಸಲಹೆ ನೀಡಲಾಗಿದೆ.

ಎಚ್-1ಬಿ ವೀಸಾದ ಪ್ರಮಾಣ ಹೆಚ್ಚಳ, ಗ್ರೀನ್ಕಾರ್ಡ್ಗಳಿಗೆ ಸಂಬಂಧಿಸಿ ದೇಶಗಳಿಗೆ ವಿಧಿಸಿರುವ ಮಿತಿಯಲ್ಲಿ ಬದಲಾವಣೆಯಂತಹ ಅಂಶಗಳನ್ನು ಈ ಮಸೂದೆ ಒಳಗೊಂಡಿಲ್ಲ. ಸಂಸತ್ತಿನ ನ್ಯಾಯಾಂಗ ಸಮಿತಿ ಅನುಮೋದಿಸಿದ ಬಳಿಕ ಸಂಸತ್ತು ಹಾಗೂ ಸೆನೆಟ್ನಲ್ಲಿ ಈ ಮಸೂದೆ ಅಂಗೀಕಾರಗೊಂಡು ಅಧ್ಯಕ್ಷರ ಸಹಿ ಪಡೆದರೆ ಕಾಯ್ದೆಯ ರೂಪ ಪಡೆಯಲಿದೆ.

   ಈ ಕಾಯ್ದೆಯು ಮಕ್ಕಳಿದ್ದಾಗ ಅಮೆರಿಕಕ್ಕೆ ಬಂದಿರುವ ದಾಖಲೆ ಪತ್ರಗಳಿಲ್ಲದ ವಲಸಿಗರಿಗೆ, ತಾತ್ಕಾಲಿಕ ಸುರಕ್ಷಾ ಸ್ಥಾನಮಾನ(ಟಿಪಿಎಸ್) ಪಡೆದ ಫಲಾನುಭವಿಗಳು, ಸಾಂಕ್ರಾಮಿಕ ರೋಗದ ಸಂದರ್ಭ ಅಗತ್ಯದ ಕಾರ್ಯ ನಿರ್ವಹಿಸುವ ಕೃಷಿ ಕೆಲಸಗಾರರು ಮತ್ತಿತರರು ಕಾಯಂ ಅಮೆರಿಕ ನಿವಾಸ ಕಾರ್ಡ್ ಅಥವಾ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಿದೆ ಎಂದು ಸಿಬಿಎಸ್ ನ್ಯೂಸ್ ವರದಿಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News