×
Ad

ಉಡುಪಿ ಚರ್ಚಿನಲ್ಲಿ ಆಸ್ಕರ್ ಪಾರ್ಥಿವ ಶರೀರಕ್ಕೆ ಪ್ರಾರ್ಥನೆ

Update: 2021-09-14 10:21 IST

ಉಡುಪಿ, ಸೆ.14: ಉಡುಪಿಯ ಶೋಕಾ ಮಾತಾ ಇಗರ್ಜಿಯಲ್ಲಿ ಮಂಗಳವಾರ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರಕ್ಕೆ ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಶಿರ್ವ ವಲಯ ಧರ್ಮಗುರು ವಂ.ಡೆನಿಸ್ ಡೇಸಾ, ಕಲ್ಯಾಣಪುರ ವಲಯ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ, ಉಡುಪಿ ಶೋಕ ಮಾತಾ ಚರ್ಚ್‌ನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಧರ್ಮಪ್ರಾಂತ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಚೇತನ್ ಲೋಬೊ, ಪೆರಂಪಳ್ಳಿ ಚರ್ಚಿನ ಧರ್ಮಗುರು ವಂ.ಅನಿಲ್ ಡಿಸೋಜ, ಶಂಕರಪುರ ಚರ್ಚಿನ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಮಣಿಪಾಲ ಚರ್ಚಿನ ವಂ.ಫೆಡ್ರಿಕ್ ಡಿಸೋಜಾ, ಸೇರಿದಂತೆ ಹಲವು ಧರ್ಮಗುರುಗಳ ಉಪಸ್ಥಿತಿಯಲ್ಲಿ ಪ್ರಾರ್ಥನೆ ನೆರವೇರಿಸಿ, ಮೃತರ ಆತ್ಮದ ಸದ್ಗತಿಗಾಗಿ ಬಲಿಪೂಜೆಯನ್ನು ನೆರವೇರಿಸಲಾಯಿತು.

ಬಳಿಕ ಧರ್ಮಪ್ರಾಂತ್ಯದ ಪರವಾಗಿ ವಂ.ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೇರಿ ಡಿಸೋಜ ಸಂಘಟನೆಯ ಪರವಾಗಿ ಪುಷ್ಪಗುಚ್ಛವಿರಿಸಿ ಶೃದ್ಧಾಂಜಲಿ ಆರ್ಪಿಸಿದರು. ಜೊತೆಗೆ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಮಕ್ಕಳಾದ ಓಶನ್, ಒಶಾನಿ ಇದ್ದರು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯುಟಿ ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಕೆ.ಗೋಪಾಲ ಪೂಜಾರಿ, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮುಖಂಡರಾದ ಜನಾರ್ದನ್ ತೋನ್ಸೆ, ಅಶೋಕ್ ಕೊಡವೂರು, ಎಂ.ಎ.ಗಫೂರ್, ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಪಂ ಸಿಇಓ ಡಾ. ನವೀನ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಆಸ್ಕರ್‌ರ ಮೂಲ ಮನೆಯಲ್ಲೂ ಗೌರವ
ಶೋಕಮಾತಾ ಇಗರ್ಜಿಯ ಬಳಿಕ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಅವರ ನೆಚ್ಚಿನ ಅಂಬಲಪಾಡಿಯಲ್ಲಿರುವ ಮೂಲ ಮನೆಗೆ ಕೊಂಡೊಯ್ಯಲಾಯಿತು.

ಈ ಮನೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಹುಟ್ಟಿ ಬೆಳೆದಿದ್ದು, 5 ಬಾರಿ ಲೋಕಸಭಾ ಸದಸ್ಯ, ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಬಳಿಕವೂ ಈ ಮನೆಯ ಮೂಲಕವೇ ಉಡುಪಿಯ ಸಂಪರ್ಕ ಇಟ್ಟುಕೊಂಡಿದ್ದರು. ಕಾಂಗ್ರೆಸ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಮನೆಯನ್ನೇ ಪಕ್ಷಕ್ಕೆ ಬಿಟ್ಟು ಕೊಟ್ಟು ಜಿಲ್ಲಾ ಕಚೇರಿಯನ್ನಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಥಿವ ಶರೀರವನ್ನು ಮನೆಗೆ ತೆಗೆದುಕೊಂಡು ಬರಲಾಯಿತು.

ಮನೆಯ ಹಾಲ್‌ನಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಮಣಿಪಾಲ ಕ್ರೈಸ್ಟ್ ಚರ್ಚ್‌ನ ಪಾ.ಫೆಡ್ರಿಕ್ ಡಿಸೋಜ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News