ನಿಫಾ ವೈರಸ್ ಬಗ್ಗೆ ಭಯ ಬೇಡ : ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಮಂಗಳೂರು, ಸೆ.14: ನಿಫಾ ವೈರಸ್ ಬಗ್ಗೆ ಯಾವುದೇ ರೀತಿಯ ಆತಂಕ, ಭಯ ಬೇಡ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.
ಗೋವಾದಲ್ಲಿ ಆರ್‌ಟಿಪಿಸಿಆರ್ ಕಿಟ್ ತಯಾರಿಸುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಜ್ವರ, ಹೃದಯ ಬಡಿತದಲ್ಲಿ ಏರಿಳಿತ ಹಾಗೂ ತಲೆನೋವು ಕಂಡು ಬಂದ ಹಿನ್ನೆಲೆಯಲ್ಲಿ ನಿಫಾದ ಲಕ್ಷಣ ಇರಬಹುದು ಎಂಬ ಶಂಕೆಯಲ್ಲಿ ಕಾರವಾರದಲ್ಲಿ ಆಸ್ರತ್ರೆಗೆ ಖುದ್ದು ದಾಖಲಾಗಿದ್ದ. ಬಳಿಕ ಅಲ್ಲಿಂದ ಮಣಿಪಾಲ ಆಸ್ಪತ್ರೆ, ಸದ್ಯ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆ ವ್ಯಕ್ತಿಯಲ್ಲಿ ಯಾವುದೇ ರೀತಿಯ ನಿಫಾ ಲಕ್ಷಣಗಳು ಕಂಡು ಬಂದಿಲ್ಲ. ಹಾಗಿದ್ದರೂ ಆತನ ರಕ್ತ, ಗಂಟಲು ದ್ರವ ಹಾಗೂ ಯೂರಿನ್ ಮಾದರಿಯನ್ನು ತಪಾಸಣೆಗಾಗಿ ಬೆಂಗಳೂರಿ ನಿಂದ ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ನಿಫಾಕ್ಕೆ ಸಂಬಂಧಿಸಿ ಆ ವ್ಯಕ್ತಿ ಎಲ್ಲಿಯೂ ಯಾರದ್ದೇ ಸಂಪರ್ಕಕ್ಕೆ ಬಂದಿಲ್ಲ. ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಆತ ಹಬ್ಬಕ್ಕಾಗಿ ಕಾರವಾರದಲ್ಲಿ ತನ್ನ ಮನೆಗೆ ಬೈಕ್‌ನಲ್ಲಿ ಬಂದ ವೇಳೆ ಮಳೆಯಲ್ಲಿ ನೆನೆದು ರಾತ್ರಿ ಜ್ವರದ ಬಂದಿತ್ತು. ಈ ಬಗ್ಗೆ ಗೂಗಲ್‌ನಲ್ಲಿ ಆತ ಹುಡುಕಾಡಿದಾಗ ಇದು ನಿಫಾದ ಲಕ್ಷಣವಿರಬಹುದೇನೋ ಎಂಬ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದರು.