ನಿಝಾಮುದ್ದೀನ್ ಮರ್ಕಝ್‍ನಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ ಗಂಭೀರ ವಿಚಾರ ಎಂದ ಕೇಂದ್ರ

Update: 2021-09-14 09:57 GMT

ಹೊಸದಿಲ್ಲಿ: ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆ  ರಾಜಧಾನಿಯ ನಿಝಾಮುದ್ದೀನ್ ಮರ್ಕಝ್‍ನಲ್ಲಿ ನಡೆದ ತಬ್ಲೀಗಿ ಜಮಾತ್‍ನಲ್ಲಿ ನಡೆದಿದೆಯೆನ್ನಲಾದ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಸಂಬಂಧಿತ ಪ್ರಕರಣವು ಗಂಭೀರವಾಗಿದೆ ಹಾಗೂ ಗಡಿಯಾಚೆಗಿನ ಪರಿಣಾಮಗಳನ್ನು ಉಂಟುಮಾಡಿದೆ ಎಂದು ಕೇಂದ್ರ ಇಂದು ದಿಲ್ಲಿ ಹೈಕೋರ್ಟ್‍ಗೆ ಹೇಳಿದೆ. ಈ ಮರ್ಕಝ್ ಅನ್ನು ಖಾಯಂ ಆಗಿ ಮುಚ್ಚಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದ ನಂತರ ಕೇಂದ್ರದ ಪ್ರತಿಕ್ರಿಯೆ ಬಂದಿದೆ.

ಮರ್ಕಝ್ ಅನ್ನು ಮರುತೆರೆಯಲು ಅನುಮತಿಸಬೇಕೆಂದು ಕೋರಿ ದಿಲ್ಲಿ ವಕ್ಫ್ ಮಂಡಳಿ ಸಲ್ಲಿಸಿದ ಅಪೀಲಿನ ಮೇಲೆ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಕಳೆದ ವರ್ಷದ ಮಾರ್ಚ್ 31ರಿಂದ ಮುಚ್ಚಲ್ಪಟ್ಟಿರುವ ಮರ್ಕಝ್ ಅನ್ನು ಇನ್ನು ಎಷ್ಟು ಸಮಯ ಮುಚ್ಚಿಡಲಾಗುವುದು ಎಂದು ಪ್ರಶ್ನಿಸಿದ ನ್ಯಾಯಾಲಯ, ಮರ್ಕಝ್ ಅನ್ನು ಖಾಯಂ ಆಗಿ ಮುಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ.

ಮರ್ಕಝ್ ಕಟ್ಟಡದ ಲೀಸ್ ಹೊಂದಿರುವವರು ಮಾತ್ರ ಮರುತೆರೆಯುವ ಕುರಿತು  ಅಪೀಲು ಸಲ್ಲಿಸಬಹುದು ಹಾಗೂ  ಮರ್ಕಝ್‍ನ ವಸತಿ ಸ್ಥಳವನ್ನು ಹಸ್ತಾಂತರಿಸುವಂತೆ  ಸ್ಥಳದ ನಿವಾಸಿ ಈಗಾಗಲೇ ಅಪೀಲು ಸಲ್ಲಿಸಿದ್ದಾರೆ ಇದು ಹೈಕೋರ್ಟ್‍ನ ಇನ್ನೊಂದು ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಾಕಿಯಿದೆ ಎಂದು ಕೇಂದ್ರ ಪರ ವಕೀಲರು ಹೇಳಿದರು.

ಕೇಂದ್ರದ ಅಫಿಡವಿಟ್‍ಗೆ ಪ್ರತಿಕ್ರಿಯಿಸಲು ವಕ್ಫ್ ಮಂಡಳಿಗೆ ಅವಕಾಶ ನೀಡಿದ  ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News