×
Ad

ಶಾಲಾ- ಕಾಲೇಜು ಶುಲ್ಕಕ್ಕಾಗಿ ಒತ್ತಡ ಹಾಕುವಂತಿಲ್ಲ : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2021-09-14 16:06 IST

ಮಂಗಳೂರು, ಸೆ.14: ರಾಜ್ಯ ಸರಕಾರದ ಸೂಚನೆಯ ಮೇರೆಗೆ ದ.ಕ. ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಶಾಲೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಈ ನಡುವೆ ಶಾಲಾ ಕಾಲೇಜುಗಳು ಶುಲ್ಕ ಪಾವತಿಸುವ ಕುರಿತಂತೆ ಒತ್ತಡ ಹೇರದಿರುವಂತೆಯೂ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಶಾಲಾ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈ ಬಗ್ಗೆ ರಾಜ್ಯ ಸರಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಅನುದಾನಿತ, ಖಾಸಗಿ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಶುಲ್ಕ ಪಾವತಿಗೆ ಒತ್ತಡ ಹಾಕದಿರಲು ನಿನ್ನೆ ನಡೆದ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ದ.ಕ. ಜಿಲ್ಲೆಯಲ್ಲಿನ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಬಹುತೇಕವಾಗಿ ಉತ್ತಮವಾಗಿವೆ. ಹಾಗಾಗಿ ಶಾಲೆಗಳಲ್ಲಿ 9ನೆ ಮತ್ತು 10ನೆ ತರಗತಿಯನ್ನು ಬೆಳಗ್ಗಿನ ಹೊತ್ತು 8ನೆ ತರಗತಿ ಮಧ್ಯಾಹ್ನದ ಬಳಿಕ ನಡೆಸಲು ತೀರ್ಮಾನಿಸಲಾಗಿದೆ. ಭೌತಿಕ ತರಗತಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿದ್ದಲ್ಲಿ ಅಂತಹ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಅಂತಿಮ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸುವಂತೆ ಬೇಡಿಕೆ ಬಂದಿದ್ದು, ಈ ಬಗ್ಗೆ ಗಂಭೀರ ಚಿಂತನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News