×
Ad

ಸೆ.22ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ 'ಕ್ರೈಂ ಸ್ಟೋರೀಸ್ : ಇಂಡಿಯಾ ಡಿಟೆಕ್ಟೀವ್ಸ್'

Update: 2021-09-14 16:39 IST

ಮಂಗಳೂರು, ಸೆ.14: ಡಾಕ್ಯುಮೆಂಟರಿ ಹಾಗೂ ವೆಬ್‌ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ನೆಟ್‌ಫ್ಲಿಕ್ಸ್‌ನಲ್ಲಿ ಸೆ. 22ರಿಂದ 'ಕ್ರೈಂ ಸ್ಟೋರೀಸ್ ಇಂಡಿಯಾ ಡಿಟೆಕ್ಟೀವ್ಸ್' ಸೀರೀಸ್ ಪ್ರಸಾರವಾಗಲಿದೆ.

ಈ ಸೀರೀಸ್‌ನ ವಿಶೇಷವೆಂದರೆ, ಬೆಂಗಳೂರಿನ ನಾಲ್ಕು ಪ್ರಮುಖ ಅಪರಾಧ ಪ್ರಕರಣಗಳ ತನಿಖೆ ಹಾಗು ಅಪರಾಧಿಗಳ ಪತ್ತೆ ಕಾರ್ಯಾಚರಣೆಯ ಕಥೆ ಇದರಲ್ಲಿ ಪ್ರಸಾರವಾಗಲಿದೆ.

ಇದು ನೈಜ ಸಾಕ್ಷಚಿತ್ರ ಮಾದರಿಯಲ್ಲಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ಡಿಸಿಪಿ ಆಗಿದ್ದ, ಈಗ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಶಿಕುಮಾರ್ ಹಾಗು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕಾಣಿಸಿಕೊಂಡಿದ್ದಾರೆ. ಈ ಸೀರೀಸ್‌ನ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದು ಕನ್ನಡದಲ್ಲಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ನೈಜ ಘಟನೆಯನ್ನು ಆಧರಿಸಿ ಮಾಡಿದ ಸೀರೀಸ್ ಇದು : ಶಶಿಕುಮಾರ್ 

‘‘2019-20ರಲ್ಲಿ ಬೆಂಗಳೂರಿನಲ್ಲಿ ಭಾಸ್ಕರ್ ರಾವ್ ಕಮಿಷನರ್ ಆಗಿದ್ದಾಗ ಲಂಡನ್ ಮೂಲದ ನೆಟ್‌ಫ್ಲಿಕ್ಸ್ ತಂಡ ಆಗಮಿಸಿದ್ದು ಅವರಿಗೆ ಮಾಹಿತಿ ನೀಡಿ ಸಹಕರಿಸುವಂತೆ ನಮಗೆ ಸೂಚನೆ ನೀಡಲಾಗಿತ್ತು. ನಾನು ಆ ಸಂದರ್ಭ ಬೆಂಗಳೂರು ಉತ್ತರ ವಿಭಾಗದಲ್ಲಿ ಡಿಸಿಪಿಯಾಗಿದ್ದೆ. ತಂಡ ನಮ್ಮನ್ನು ಸಂಪರ್ಕಿಸಿ ಅಪರಾಧ ಕೃತ್ಯಗಳ ನೈಜ ಘಟನೆಗಳ ಸಾಕ್ಷಚಿತ್ರಗಳನ್ನು ಚಿತ್ರೀಕರಿಸಿತ್ತು. ನಾಲ್ಕು ಸೀರೀಸ್‌ಗಳು ನಮ್ಮ ಬೆಂಗಳೂರು ತಂಡದ್ದಾಗಿದೆ. ನಿರ್ದೇಶನ ನಿರ್ಮಾಣ ಎಲ್ಲವೂ ನೆಟ್‌ಫ್ಲಿಕ್ಸ್‌ನ ಲಂಡನ್ ಮೂಲದ ವಿದೇಶಿಯರು ನಿರ್ವಹಿಸಿದ್ದಾರೆ. ಉಳಿದಂತೆ ತಾಂತ್ರಿಕವಾಗಿ ಸ್ಥಳೀಯರು ಸಹಕರಿಸಿದ್ದರು. ರಿಯಲ್ ಟೈಮ್ ಬೇಸಿಸ್‌ನಲ್ಲಿ ಶೂಟಿಂಗ್ ನಡೆದಿದ್ದು, ಯಾವುದೇ ಫಿಕ್ಷನ್ ಅಥವಾ ಸೀನ್ ಕ್ರಿಯೇಟ್ ಮಾಡಲಾಗಿಲ್ಲ. ಒಂದು ಅಪರಾಧ ಕೃತ್ಯ ನಡೆದಾಗ ಪೊಲೀಸರ ತಂಡ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಘಟನಾವಳಿಯನ್ನು ಒಳಗೊಂಡು ಚಿತ್ರೀಕರಣ ನಡೆಸಲಾಗಿದೆ.

ವೈಟ್ ಫೀಲ್ಡ್ ಡಿಸಿಪಿಯಾಗಿದ್ದ ಅನುಚೇತ್, ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಸುಬ್ರಹ್ಮಣ್ಯ ನಗರದ ಸಬ್ ಇನ್ಸ್‌ಪೆಕ್ಟರ್ ಲತಾ, ಸಂಜಯ್ ನಗರ ಸಬ್ ಇನ್ಸ್‌ಪೆಕ್ಟರ್ ರೂಪಾ ಸೇರಿದಂತೆ ಪೊಲೀಸ್ ತಂಡ ಜತೆಯಾಗಿ ನಿರ್ವಹಿಸಿದ ಕರ್ತವ್ಯವನ್ನು ಸೀರಿಸ್ ರೂಪದಲ್ಲಿ ಚಿತ್ರೀಕರಿಸಲಾಗಿತ್ತು. ನನಗೆ ತಿಳಿದಂತೆ ಉತ್ತರ ವಿಭಾಗದ ನಂದಿನಿ ಲೇಔಟ್, ಸುಬ್ರಹ್ಮಣ್ಯ ನಗರ ಹಾಗೂ ಸಂಜಯ್ ನಗರದ ಮೂರು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ಈ ಸೀರೀಸ್‌ನಲ್ಲಿ ಒಳಗೊಂಡಿರುವಂತಿದೆ’’

- ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News